PV ಸ್ಪೇಷಲ್ : ಯಾದಗಿರಿ ಜಿಲ್ಲೆಯ ಪಿಯು ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿರುವ ಕಾರಣವಾದರೂ ಏನಿರಬಹುದು?
ಪ್ರಜಾ ವೀಕ್ಷಣೆ ವಿಶೇಷ ಲೇಖನ : ಕಳೆದ 2 ವರ್ಷಗಳಿಂದ ನಾನು ಯಾದಗಿರಿಯಲ್ಲಿ ವಾಸಿಸುತ್ತಿರುವುದರಿಂದ ಇವತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದ ನಂತರ ನನಗೆ ಹಲವು ಕರೆಗಳು ಬಂದವು. ಏನು ಯಾದಗಿರಿ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ ಕೊನೆ ಸ್ಥಾನದಲ್ಲಿದೆ ಅಂತ ! ಬಹಳ ಬೇಜಾರು ಅನ್ಸತ್ತಪ್ಪ ಅಲ್ಲಿನ ಪ್ರತಿನಿಧಿಗಳಿಗಾದ್ರು ನಾಚಿಕೆ ಆಗಲ್ವಾ ಅಂತ…!
ಹೊಟ್ಟಿ – ಬಟ್ಟಿ ಕಟ್ಕೊಂಡು ದುಡಿಯಕ್ಕೆ ಅಂತ ಬೆಂಗಳೂರಿಗೆ ಜನರಲ್ ಭೋಗಿಗಳಲ್ಲಿ ಹುಳುಗಳ ಹಾಗೇ ಸ್ವಲ್ಪ ಸಹ ಗೌರವ ಸಿಗದೇ ಪ್ರಯಾಣ ಮಾಡೋ ನಮ್ಮ ಜನರನ್ನ ಕಂಡ್ರೆ ನಾಚಿಕೆ ಪಡದ ಇವರು ಶೈಕ್ಷಣಿಕ ವಿಷಯದ ಕುರಿತು ನಾಚಿಕೆ ಪಡುತ್ತಾರೆಯೇ? ಅಷ್ಟಕ್ಕೂ ಈ ಫಲಿತಾಂಶದಲ್ಲಿ ಯಾದಗಿರಿ ಕೊನೆ ಸ್ಥಾನದಲ್ಲಿ ಇರೋಕೆ ಕಾರಣವಾದ್ರೂ ಏನು?
ನಮ್ಮ ಈ ಯಾದಗಿರಿ ಜಿಲ್ಲೆಯಲ್ಲಿ ಶಿಕ್ಷಣ ಒಂದು ಮೂಲಭೂತ ಸೌಲಭ್ಯ ಎಂದು ಪರಿಗಣನೆಗೆ ತೆಗೆದುಕೊಳ್ಳುವಂತೆಯೇ ಇಲ್ಲ! ಏಕೆಂದರೆ ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳು ಕಳೆದರೂ ಸಹ ಇಂದಿಗೂ ಮೂಲಭೂತ ಸೌಲಭ್ಯಗಳಾದ ಆಹಾರ, ವಸತಿ ಹಾಗೂ ಆರೋಗ್ಯಕ್ಕೆ ಪರದಾಡುವಂತೆ ನಮ್ಮ ಜನಗಳನ್ನು ಶಿಕ್ಷಣ ಪಡೆಯುವುದು ಹೊಟ್ಟೆಗೆ ಹಿಟ್ಟಿಲ್ಲದವನಿಗೆ, ಜುಟ್ಟಿಗೆ ಮಲ್ಲಿಗೆ ಹೂ ಕೊಟ್ಟಂತಾಗುತ್ತದೆ.! ಇಷ್ಟು ಕಷ್ಟ ಅನ್ನೋ ಹಾಗಿದ್ರೆ ಯಾದರಿಯಲ್ಲಿ ಯಾರು ಸಹ ಶಿಕ್ಷಣ ತೊಗೋಳ್ತಿಲ್ವಾ ಅಂತ ಕೇಳದ್ರೆ ಖಂಡಿತ ತೊಗೋಳ್ತಿದಾರೆ. ಎಂತಹ ಶಿಕ್ಷಣ ಗೊತ್ತಾ?
ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಏಕೋಪಾಧ್ಯಾಯ ಶಾಲೆಗಳಿರುವುದು ಇದೇ ಯಾದಗಿರಿಯಲ್ಲಿ. ಅರ್ಥಾತ್ ಒಬ್ಬರೇ ಶಿಕ್ಷಕರಿಂದ ಇಡೀ ಶಾಲೆ ನಡೆಯುತ್ತಿದೆ! ಕನಿಷ್ಠ 9 ಶಿಕ್ಷಕರನ್ನು ಹೊಂದಿರಬೇಕಾದ ಶಾಲೆಯಲ್ಲಿ ಒಬ್ಬನೇ ಒಬ್ಬ ಶಿಕ್ಷಕ ಏನು ತಾನೆ ಕಲಿಸುವುದು? ಆ ಶಾಲೆಯ ಮಕ್ಕಳು ಯಾವ ವಿಷಯ ಅಭ್ಯಾಸ ಮಾಡಬೇಕು ಹೇಳಿ?
* ಶಿಕ್ಷಕರು ಯಾದಗಿರಿ ಒಂದು ಕುಗ್ರಾಮ. ಇದು ಹೆಸರಿಗೆ ಮಾತ್ರ ಜಿಲ್ಲೆ. ಇಲ್ಲಿ ಬದುಕು ನಡೆಸುವುದು ಅಸಾಧ್ಯ ಅಂತಲೋ ಅಥವಾ ಅನಿವಾರ್ಯ ಗಳಿಂದಲೋ ವರ್ಗಾವಣೆ ಹೊಂದಿರುತ್ತಾರೆ. ಆ ಜಾಗಗಳಿಗೆ ಇಲ್ಲಿಯವರೆಗೂ ಯಾರೊಬ್ಬರನ್ನು ಸಹ ನೇಮಕ ಮಾಡಿಕೊಂಡಿಲ್ಲ. ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಬಿದ್ದಿವೆ. ಹೀಗಿರುವಾಗ ಇರುವ ಶಿಕ್ಷಕರು ಅದೆಷ್ಟೇ ಶ್ರಮ ಹಾಕಿದರೂ ಇಷ್ಟು ಸಂಖ್ಯೆಯ ಮಕ್ಕಳಿಗೆ ಶಿಕ್ಷಣ ಕೊಡುವುದಾದರೂ ಹೇಗೆ????!
3. ಇನ್ನು ಶಾಲಾ ಶಿಕ್ಷಣ ಸರಿಯಾಗಿದ್ದರೆ ಮಾತ್ರ ಪಿಯುಸಿಯಲ್ಲಿ ವಿದ್ಯಾರ್ಥಿ ಚೆನ್ನಾಗಿ ಓದಲು ಸಾಧ್ಯ ಅಲ್ಲವೇ? ಆದರೆ ನಮ್ಮಲ್ಲಿ ಶಾಲಾ ಶಿಕ್ಷಣ ಅಧೋಗತಿಯಲ್ಲಿದೆ. ಶಾಲೆಯಲ್ಲಿ ಸರಿಯಾದ ಕಟ್ಟಡ ವ್ಯವಸ್ಥೆ ಇಲ್ಲ. ಅತ್ಯಂತ ಹಿಂದುಳಿದ ಜೀವನ ಶೈಲಿ ಹಾಗೂ ವಿಚಾರ ಇರುವ ನಮ್ಮ ಜನ ತುಂಬಾ ಯೋಚನೆ ಮಾಡಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಆ ಶಾಲೆಗಳಲ್ಲಿ ಅವರಿಗೆ ರಕ್ಷಣೆ ಬಿಡಿ, ಕನಿಷ್ಠ ಪಕ್ಷ ಶೌಚಾಲಯಗಳ ವ್ಯವಸ್ಥೆಯೂ ಇಲ್ಲ. ಪಾಠ ಮಾಡಲು ಶಾಲೆಗೆ ಬರುವ ಶಿಕ್ಷಕರಿಗೆ ಶೌಚಾಲಯಗಳ ವ್ಯವಸ್ಥೆ ಮಾಡದ ಸರಕಾರ ಈ ಮಕ್ಕಳಿಗೆ ಶೌಚಾಲಯಗಳ ವ್ಯವಸ್ಥೆ ಮಾಡಿತೇ?
4. ಇನ್ನು ಶಾಲೆ ಕಲಿಯಲು ಕಷ್ಟ ಪಡಬೇಕು, ನಾವೆಲ್ಲಾ ಎಷ್ಟೆಷ್ಟೋ ಕಿ.ಮೀ ದೂರ ನಡ್ಕೊಂಡು ಹೋಗಿ ಅಕ್ಷರ ಕಲ್ತಿದೀವಿ ಅಂತ ಉಪದೇಶ ಮಾಡೋ ನಮ್ಮ ಜನ ಸ್ವತಂತ್ರ ಭಾರತದಲ್ಲಿ ಸಾರಿಗೆ ವ್ಯವಸ್ಥೆ ಒಂದು ಕನಿಷ್ಠ ಸೌಲಭ್ಯ ಅಂತ ಅಂದುಕೊಂಡೇ ಇಲ್ಲ ಅನ್ಸತ್ತೆ. ಹೀಗಿರುವಾಗ ಮಕ್ಕಳು ಶಾಲೆಗೆ ಹೋಗಬೇಕೆಂದರೆ ಇವತ್ತಿಗೂ ಕಿಲೋ ಮೀಟರ್ ಗಟ್ಟಲೇ ನಡೀಬೇಕು, ಇಲ್ಲ ಸರಕಾರಿ ಬಸ್ಸು ಗಳ ಆಸೆ ಬಿಟ್ಟು ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡ್ಬೇಕು. ಸರಕಾರಿ ಶಾಲೆಯಲ್ಲಿ ಶಿಕ್ಷಣ ಏನೊ ಉಚಿತ! ಆದ್ರೆ ಸರಕಾರಿ ಬಸ್ಸು ಸಹ ಆ ಊರಿಗೆ ಹೋಗ್ಬೇಕಲ್ವಾ? ಕೆಲವು ಮಕ್ಕಳಿಗೆ ಚಳಿ, ಮಳಿ, ಬಿಸಿಲು ಯಾವ ಕಾಲಕ್ಕೂ ಈ ಕಾಲ್ನಡಿಗೆ ಇವತ್ತಿಗೂ ನಮ್ಮ ಜಿಲ್ಲೆಯಲ್ಲಿ ತಪ್ಪಿದ್ದಲ್ಲ!
5. ಕೇವಲ ಸಮಸ್ಯೆನೇ ಮಾತಾಡ್ತೀರಿ, ಒಳ್ಳೆ ಸೌಲಭ್ಯ ಇದ್ರೂ ಮಕ್ಕಳು ಓದಲ್ಲ ರಿ ಅನ್ನೋರು ಒಂದು ಸಲ ಅವರ ಮನೆಗಳ ಪರಿಸ್ಥಿತಿ ನೋಡ್ಕೊಂಡು ಬರ್ರಿ. ಆ ಕಿತ್ತು ತಿನ್ನೋ ಬಡತನ! ದುಡಿಮೆಯ ನೋವು ಮರೆಯಲು ಕುಡಿತಕ್ಕೆ ಬಲಿಯಾದ ಅಪ್ಪ! ದಿನಪ್ರತಿ ಹೇಗಾದ್ರು ಮಾಡಿ ಮಕ್ಕಳನ್ನ ಒಳ್ಳೆ ರೀತಿಯಲ್ಲಿ ಬದಕಸ್ಬೇಕು ಅಂತ ಹೊಲದಲ್ಲೋ, ಗಾರೆ ಕೆಲಸದಲ್ಲೋ ಸುಟ್ಟು ಸುಣ್ಣವಾದ ತಾಯಿ! ಅಮ್ಮ – ಅಪ್ಪ ಕಷ್ಟ ಪಟ್ಟು ಓದ್ಸದ್ರೂ ಕೆಲಸ ಸಿಗದೇ job ಗಾಗಿ ಅಲೆದು – ಅಲೆದು ಬೇಸತ್ತು ಕೆಟ್ಟ ಚಟಗಳಿಗೆ ಬಲಿಯಾದ ಅಣ್ಣ! ಹೊಲ ಮಾರಿ ವರದಕ್ಷಿಣೆ ಕೊಟ್ಟು ಮದುವೆ ಮಾಡದ್ರು, ಗಂಡನ ಮನೆಯಲ್ಲಿ ಕಿರುಕುಳಕ್ಕೆ ಒಳಗಾಗಿ ಮತ್ತೆ ಅಪ್ಪನ ಮನೆ ಬಂದು ಸೇರಿದ ಅಕ್ಕ! ಇದ್ಯಾವುದು ಇಲ್ಲವಾ, ತೊಗೊಂಡ ಸಾಲಕ್ಕೆ ಬಡ್ಡಿ ತೀರ್ಸು ಅಂತ ದಿನ ಬೆಳಗಾದ್ರೆ ಅಪ್ಪನನ್ನ ಪೀಡಿಸಲು ಮನೆ ಮುಂದೆ ಬಂದು ನಿಲ್ಲೋ ಸಾಲಗಾರ! ಇಷ್ಟೆಲ್ಲ ರಗಳೆ ಆ ಮಗುನಾ ಸುಮ್ನೆ ಓದಕ್ ಬಿಡ್ತದಾ?
ಹೇಳುತ್ತಾ ಹೋದರೆ ಹಾಗೇ ಪಟ್ಟಿ ಬೆಳಿತಾನೆ ಹೋಗತ್ತೆ. ನಾನು ಹೇಳಿದ್ದರ ಕುರಿತು ಏನೇ ಶಂಕೆ ಇದ್ದಲ್ಲಿ ಒಂದು ವಾರ ಈ ಯಾದಗಿಯಲ್ಲಿ ಬದುಕಿ ನೋಡಿ! ನಿಮಗೆ ಸತ್ಯ ರಾಚಿ – ರಾಚಿ ಮುಖಕ್ಕೆ ಹೊಡೆಯತ್ತೆ! ಯಾವ ರಾಜಕಾರಣಿಗಳು ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕೆಂದು ನಾವು ಪ್ರಾರಂಭದಲ್ಲಿ ಮಾತಾಡ್ತಿಡ್ವೊ ಅವ್ರು ಇಲ್ಲಿ ಕೇವಲ ಜಾತಿ ರಾಜಕೀಯವನ್ನು ಜೀವಂತವಾಗಿಟ್ಟು ಜನಗಳಿಂದ ವೋಟ್ ಪಡೆದು ಉದ್ದಾರ ಆಗುತ್ತಿದ್ದಾರೆಯೇ ಹೊರತು ಕವಡಿ ಕಾಸಿನ ಕೆಲಸ ಇವರ್ಯಾರು ಮಾಡ್ತಿಲ್ಲ. ಗುಡಿ ಕಟ್ಟೋದು, ದೊಡ್ಡ ದೊಡ್ಡ ಜಾತ್ರಿ ಮಾಡ್ಸೋದು, ಆ ಮುತ್ಯಾಗ್ ಕರ್ಸೋದು, ಈ ಬಾಬಾ ಕಾಲು ಬೀಳೋದು, ಹೀಗೆ ಸಾಲು ಸಾಲಾಗಿ ಡೊಂಬರಾಟವೇ! ಪಾಪ ನಮ್ಮ ಜನ ಕಷ್ಟ ಪಟ್ಟು ದುಡದಿದ್ದೆಲ್ಲಾ ತಂದು ಆ ದೇವ್ರು, ಈ ಹರಕಿ ಅಂತ ದುಡ್ಡು ಸುರದು ಮತ್ತೆ ಗಂಟು ಮೂಟೆ ಕಟ್ಟಿ ದುಡಿಯಕ್ ಹೋಗ್ತಾರು!
ಅದಕ್ಕೆ ಕೇವಲ ಪರೀಕ್ಷೆ ಫಲಿತಾಂಶ ಬಂದಾಗ ನಮ್ಮ ಜಿಲ್ಲೆಯ ಹೆಸರು ಟಿವಿ ಒಳಗ್ ಬಂದ್ರ ಸಾಕಾಗಂಗಿಲ್ಲ. ಇದ್ರಿಂದ ಕಡಿಮೆ ರೀಸಲ್ಟ್ ಬಂದಿರೋ ಕಾಲೇಜಿನ ಶಿಕ್ಷಕರ ಮ್ಯಾಲ ಇವ್ರು ಹರಿಹಾಯ್ತಾರೆ ಹೊರತು, ಸಮಸ್ಯೆ ಬಗ್ಗೆ ಬಗೆಹರಿಯೋದಿಲ್ಲ. ಮಾಧ್ಯಮಗಳು ಈ ಉಳಿದ ಸಮಸ್ಯೆಗಳ ಬಗ್ಗೆ ತೋರಸ್ಲಿ ನೋಡೋಣ!!! ಇದಕ್ಕ ನಮ್ಮ ಜಿಲ್ಲೆಯ ಜನ ಎಲ್ಲಾ ಒಂದಾಗಿ ಈ ಸರಕಾರಗಳ, ರಾಜಕಾರಣಿಗಳ, ಅಧಿಕಾರಿಗಳ ಕೊರಳ ಪಟ್ಟಿ ಹಿಡಿದು ತಮ್ಮ ಹಕ್ಕುಗಳಿಗಾಗಿ ತಾವು ಹೋರಾಡಕ್ ಮುಂದು ಬಂದ್ರೇನೇ ಇವರನ್ನ ಮಣಿಸಕ್ ಸಾಧ್ಯ! ಇದಾಗ್ಬಾರ್ದು ಅಂತಾನೇ ನಮ್ಮವ್ರನ್ನ ಈ ವ್ಯವಸ್ಥೆ ಒಂದೊತ್ತಿನ ಊಟಕ್ಕೂ ಗತಿ ಇಲ್ಲದ ಹಾಗೇ ಮಾಡಿ, ಇಷ್ಟು ಬ್ಯುಸಿ ಇಟ್ಟಾರ. ಜಿಲ್ಲೆಯಲ್ಲಿ ಒಂದು ಫ್ಯಾಕ್ಟರಿ ನೂ ಇಲ್ಲದೇ, ಮಾಡೋ ಕೈಗೆ ಕೆಲಸ ಇಲ್ಲದೇ ನಮ್ಮ ಜನ ಇಡೀ ಜೀವನ ಊಟಕ್ಕ,ಮಕ್ಕಳ ಶಿಕ್ಷಣ, ಮದುವಿ, ಹೊಲ, ಗೊಬ್ಬರ ಅಂತ ಸಾಲ ತೀರಸ್ಕೊಂಡೆ ಇರ್ಬೇಕು, ಹಿಂಗೆ ಮಂದಿ ಮನಿ ಸುಟ್ಟಾಗ ಆ ಬೆಂಕಿನಲ್ಲಿ ನಮ್ಮ ಬ್ಯಾಳಿ ಬೇಯಿಸ್ಕೊಬೇಕು ಅಂತ ನಮ್ಮ ಜಿಲ್ಲೆಯ ರಾಜಕೀಯದ ಮಂದಿ ಲೆಕ್ಕ ನೋಡ್ರಿ!