ಗಜೇಂದ್ರಗಡ: ಶಾಸಕ ಕಳಕಪ್ಪ ಬಂಡಿ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಲು ನಿರಾಕರಿಸಿದರೆ ಎಸ್‌ಎಸ್‌ಕೆ ಸಮಾಜದ ಧುರೀಣ ಮೋಹನಸಾ ರಾಯಬಾಗಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಸ್ಥಳೀಯ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ವಿಶ್ವನಾಥಸಾ ಮೇಘರಾಜ ಹೇಳಿದರು.
ಸ್ಥಳೀಯ ಮೋಹನಸಾ ರಾಯಬಾಗಿ ಅವರ ನಿವಾಸದಲ್ಲಿ ಬುಧವಾರ ಎಸ್‌ಎಸ್‌ಕೆ ಸಮಾಜ ಹಾಗೂ ಕ್ಷತ್ರಿಯ ಒಕ್ಕೂಟದಿಂದ ನಡೆದ ಸಭೆಯಲ್ಲಿ ಮಾತನಾಡಿದರು.
ಕ್ಷತ್ರಿಯರು ಹಾಗೂ ಕ್ಷತ್ರಿಯ ಒಕ್ಕೂಟದವರು ಬಿಜೆಪಿ ಪಕ್ಷದಿಂದ ಯಾರೇ ನಿಂತರೂ ಸಹ ನಾವು ಬಿಜೆಪಿಗೆ ಮತವನ್ನು ಹಾಕುತ್ತೇವೆ. ಬಿಜೆಪಿ ಹೈಕಮಾಂಡ್ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಿಲ್ಲೆಯ ೩ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಆದರೆ ರೋಣ ಮತಕ್ಷೇತ್ರಕ್ಕೆ ಶಾಸಕ ಕಳಕಪ್ಪ ಬಂಡಿ ಹೆಸರನ್ನು ಪ್ರಕಟಿಸಿಲ್ಲ. ಹೀಗಾಗಿ ಬಿಜೆಪಿ ಹೈಕಮಾಂಡ್ ಶಾಸಕ ಬಂಡಿ ಅವರಿಗೆ ಟಿಕೆಟ್ ನೀಡಿದರೆ ನೀಡಲಿ. ಆದರೆ ಶಾಸಕ ಬಂಡಿ ಅವರಿಗೆ ಟಿಕೆಟ್ ನೀಡದಿದ್ದರೆ ನಮ್ಮ ಸಮಾಜದ ಮುಖಂಡ ಮೋಹನಸಾ ರಾಯಬಾಗಿ ಅವರಿಗೆ ಟಿಕೆಟ್ ನೀಡಬೇಕು ಎಂದರು.
ಎಸ್‌ಎಸ್‌ಕೆ ಹಿತರಕ್ಷಣಾ ಸಮಿತಿ ಮಾಜಿ ಅಧ್ಯಕ್ಷ ಸುರೇಂದ್ರಸಾ ರಾಯಬಾಗಿ, ಸಮಾಜದ ಉಪಾಧ್ಯಕ್ಷ ಕೆ.ಎಸ್.ಪವಾರ ಮಾತನಾಡಿ, ಪಟ್ಟಣದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಲು ಶಾಸಕ ಕಳಕಪ್ಪ ಬಂಡಿ, ಮೋಹನಸಾ ರಾಯಬಾಗಿ, ಮಠದ ಹಾಗೂ ಶರಣಪ್ಪ ಭಗವತಿ ಪಾತ್ರ ಮುಖ್ಯವಾಗಿದೆ. ಕ್ಷೇತ್ರದಲ್ಲಿ 40 ಸಾವಿರಕ್ಕೂ ಅಧಿಕ ಮತದಾರರಿರುವ ಕ್ಷತ್ರಿಯ ಒಕ್ಕೂಟದ ಬೇಡಿಕೆಯಂತೆ ಶಾಸಕ ಬಂಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದರೆ ಮೋಹನಸಾ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ವಕೀಲ ಆರ್.ಎಂ.ರಾಯಬಾಗಿ ಹಾಗೂ ವಸಂತರಾವ್ ಮೋಹಿತೆ ಮಾತನಾಡಿ, ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಅವರಿಂದ ಶಾಸಕ ಬಂಡಿ ಅವರಿಗೆ ಟಿಕೆಟ್ ನೀಡಿದಿದ್ದರೆ ಮೋಹನಸಾ ಅವರಿಗೆ ಟಿಕೆಟ್ ನೀಡಿ ಎಂದು ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡಲಾಗಿದೆ. ಕಾರ್ಯಕರ್ತರನ್ನು ಗುರುತಿಸುವ ಪಕ್ಷವಾಗಿರುವ ಬಿಜೆಪಿ ಮೋಹನಸಾ ಅವರಿಗೆ ಟಿಕೆಟ್ ನೀಡುವ ಮೂಲಕ ರಾಜಕೀಯ ಅನ್ಯಾಯವನ್ನು ಸರಪಡಿಸಬೇಕು ಎಂದು ಕ್ಷತ್ರಿಯ ಒಕ್ಕೊಟದಿಂದ ಬಿಜೆಪಿ ಹೈಕಮಾಂಡ್‌ಗೆ ಒತ್ತಾಯಿಸಿದ್ದೇವೆ ಎಂದರು.
ಬಾಬಣ್ಣಸಾ ರಾಯಬಾಗಿ, ರುಕ್ಮಣಸಾ ರಾಯಬಾಗಿ, ರಾಘವೇಂದ್ರ ರಾಯಬಾಗಿ, ವಿನಾಯಕ ಜರತಾರಿ, ರವಿ ಶಿಂಗ್ರಿ, ಅಂಬಾಸಾ ರಾಯಬಾಗಿ, ಗಣೇಶ ಪವಾರ, ಸುರೇಂದ್ರಸಾ ರಂಗ್ರೇಜಿ, ರಾಜು ಮಿಸ್ಕಿನ, ಪ್ರವೀಣ ರಾಯಬಾಗಿ, ಜ್ಞಾನು ಮೆಹರವಾಡೆ, ಹನಮಂತಸಾ ಜರತಾರಿ, ಚಂದ್ರು ರಾಯಬಾಗಿ, ಬಾಬಣ್ಣಸಾ ರಾಜೋಳ್ಳಿ ಸೇರಿ ಇತರರು ಇದ್ದರು.