ವಿಶೇಷ ಲೇಖನ :- ಅಧಿಕಾರದಾಹಿ ರಾಜಕಾರಣ : ಬಿಜೆಪಿ‌ ಅಂತ್ಯಕ್ಕೆ ಮುನ್ನುಡಿ…

You are currently viewing ವಿಶೇಷ ಲೇಖನ :- ಅಧಿಕಾರದಾಹಿ ರಾಜಕಾರಣ : ಬಿಜೆಪಿ‌ ಅಂತ್ಯಕ್ಕೆ ಮುನ್ನುಡಿ…

ಬಿಜೆಪಿಯ ಹಿರಿಯ ನಾಯಕರಾಗಿ, ಮುಖ್ಯಮಂತ್ರಿಯೂ ಆಗಿದ್ದ ಜಗದೀಶ ಶೆಟ್ಟರ್ ಬಿಜೆಪಿಗೆ ರಾಜೀನಾಮೆ‌ ನೀಡಿ ಕಾಂಗ್ರೆಸ್ ಸೇರಿದರು. ಅವರಿಗಿಂತ ಮೊದಲು ಲಕ್ಷ್ಮಣ ಸವದಿ ಈ ಹಾದಿ ತುಳಿದಿದ್ದರು. ಪಕ್ಷನಿಷ್ಠರಾಗಿದ್ದ ಇವರಿಬ್ಬರ ಅನಿರೀಕ್ಷಿತ ರಾಜೀನಾಮೆ ಮತ್ತು ಕಾಂಗ್ರೆಸ್ ಸೇರ್ಪಡೆ ಬಿಜೆಪಿಗೆ ಭಾರಿ ಆಘಾತ ನೀಡಿದೆ. ಅದಕ್ಕಿಂತ ಮುಖ್ಯವಾಗಿ ಇದು ಬಿಜೆಪಿ ತನಗೆ ತಾನೇ ಗುಂಡಿ ತೋಡಿರುವುದರ ಸುಳಿವು. ಬಿಜೆಪಿ ಈ ಮೂಲಕ ತನ್ನ ಅಧಃಪತನವನ್ನು ಖಾತ್ರಿಪಡಿಸಿಕೊಂಡ ಹಾಗಿದೆ.

ಶೆಟ್ಟರ್ ಎಂದಿಗೂ ರಾಜಕೀಯಕ್ಕಾಗಿ, ಅಧಿಕಾರಕ್ಕಾಗಿ ತನ್ನ ಭಾಷೆಯನ್ನು, ವ್ಯಕ್ತಿತ್ವವನ್ನು ಕೆಡಿಸಿಕೊಂಡಿಲ್ಲ. ಅನಗತ್ಯ ಹೇಳಿಕೆಗಳಿಲ್ಲ, ಕೋಮು ಪ್ರಚೋದಿತ ಭಾಷಣ ಇಲ್ಲ, ಒಟ್ಟಿನಲ್ಲಿ ಫೈರ್ ಬ್ರಾಂಡ್ ಆಗಿ ಕಾಣಿಸಿಕೊಂಡವರಲ್ಲ. ಮೊನ್ನೆ ಮೊನ್ನೆ ಚಿಗುರಿಕೊಂಡ ಮೀಸೆ ಬೆಳೆಯದ ಸಂಸದರ ಅರಚಾಟ, ಸುಳ್ಳುಗಳ ಸರಮಾಲೆ ಪೋಣಿಸುವಿಕೆಯ ಜಾಣ್ಮೆ, ಮುಸ್ಲಿಂ ವಿರೋಧಿ ಹೇಳಿಕೆ, ವಿಷಭಾಷಣ, ಲಜ್ಜಾಹೀನತೆ, ನಿತ್ಯ ಮೋದಿ ನಾಮಜಪ ಇಂತಹ ಯಾವುದೇ ಅ(ನ)ರ್ಹತೆಗಳನ್ನು ಶೆಟ್ಟರ್‌ ಹೊಂದಿರಲಿಲ್ಲ. ಬಹುಶಃ ಇವೇ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನೀಡದಿರಲು ಕಾರಣವೂ ಹೌದು.

ಶೆಟ್ಟರ್ ಗೌರವ ಕೊಟ್ಟು ಗೌರವ ಪಡೆದುಕೊಳ್ಳುವ ಗುಣದವರು‌. ಏಪ್ರಿಲ್ 18ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶೆಟ್ಟರ್, ಬಿಜೆಪಿಯ ಹಲವು ಮುಖಂಡರು ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಕಿಡಿ ಕಾರಿದ್ದರು. ಇದು ನಿಜವೂ ಹೌದು. ಶೆಟ್ಟರ್ ಬಿಜೆಪಿಯಲ್ಲಿ ಎಂದಿಗೂ ಗೌರವಕ್ಕೆ ಅರ್ಹ ವ್ಯಕ್ತಿಯೇ ಆಗಿದ್ದರು. ಒಬ್ಬ ಕಳಂಕರಹಿತ ವ್ಯಕ್ತಿಗೆ ಕೊಡಬೇಕಾದ ಕನಿಷ್ಠ ಗೌರವವನ್ನು ನೀಡದೆ, ಕೊನೆಗೆ ಸಿಟ್ಟಿಗೆದ್ದು ಪಕ್ಷದಿಂದ ಹೊರ ನಡೆದಾಗ ಅವರನ್ನು ಟೀಕಿಸುವುದು ನಾಚಿಕೆಗೇಡಿನ ಲಕ್ಷಣ.

ಹಲವು ವರ್ಷಗಳ ಹಿಂದೆ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಈಗ ಶೆಟ್ಟರ್ ವಿರುದ್ಧ ಮಾತನಾಡುತ್ತಿದ್ದಾರೆ. ವಾಸ್ತವದಲ್ಲಿ ಯಡಿಯೂರಪ್ಪ ಅವರನ್ನು ಪಕ್ಷ ಅಂದು ಮೂಲೆಗುಂಪು ಮಾಡಿದ್ದರಿಂದಲೇ ಅವರು ಕೆಜೆಪಿ ಕಟ್ಟಬೇಕಾಯ್ತು. ಈಗಲೂ ಯಡಿಯೂರಪ್ಪ ಅವರನ್ನು ಬಿಜೆಪಿ ಕೇಂದ್ರ ಹಾಗೂ ರಾಜ್ಯದ ನಾಯಕರು ಮೂಲೆಗುಂಪು ಮಾಡಿ ವರ್ಷಗಳೇ ಕಳೆದಿವೆ. ಅವರೂ ಶೆಟ್ಟರ್ ಹಾದಿ ಹಿಡಿಯುವವರೇ ಆಗಿದ್ದರು. ಈಗ ಜನರು ಅವರನ್ನು ಹಾಡಿ ಹೊಗಳಿಕೊಳ್ಳುತ್ತಿದ್ದಾರೆ. ಆದರೆ ಯಡಿಯೂರಪ್ಪ ಪಕ್ಷ ಬಿಡದಿರಲು ದೊಡ್ಡ ಕಾರಣವಿದೆ. ಬಿ.ವೈ. ವಿಜಯೇಂದ್ರಗೆ ಅಧಿಕಾರ ದಕ್ಕಿಸಿಕೊಡುವುದು. ಅರ್ಧದಲ್ಲೇ ಕೈಬಿಟ್ಟು ಕಾಂಗ್ರೆಸ್ ಅಥವಾ ಬೇರೆ ಪಕ್ಷ ಸೇರುವ ಸ್ಥಿತಿಯಲ್ಲಿ ಸದ್ಯಕ್ಕೆ ಯಡಿಯೂರಪ್ಪ ಇಲ್ಲ ಹಾಗೂ ತಮ್ಮ ಮಗನಿಗೆ ಅಧಿಕಾರ ಕೊಡಿಸುವ ಹಠ ಅವರನ್ನು ಬಿಜೆಪಿಯಲ್ಲಿ ಉಳಿಸಿದೆಯೇ ಹೊರತು ಅಂತಹ ಅಪ್ಪಟ ಪಕ್ಷನಿಷ್ಠೆಯವರು ಬಿಎಸ್ ವೈ ಅಲ್ಲ. ಒಂದು ವೇಳೆ ಪಕ್ಷನಿಷ್ಠರು ಹೌದು ಎಂದಾದರೂ ಸದ್ಯ ಅವರನ್ನು ಕಡೆಗಣನೆ ಮಾಡುವ ಪರಿಗಾದರೂ ಅವರು ಅಲ್ಲಿಂದ ಹೊರಬರಬೇಕಿತ್ತು. ಶೆಟ್ಟರ್ ಅಂತಹ ಅನುಭವದ ಅರ್ಧದಷ್ಟನ್ನೂ ಸಹಿಸಿಕೊಳ್ಳಲಿಲ್ಲ. ಅದು ಶೆಟ್ಟರ್ ಅವರ ಸ್ವಾಭಿಮಾನವೂ ಹೌದು. ಅದರ ಜೊತೆಗೆ ಬಿಎಸ್ ವೈ ಪುತ್ರ ವಿಜಯೇಂದ್ರ ಅವರ ಮಟ್ಟಕ್ಕೆ ತಮ್ಮ ಮಗ ರಾಜಕೀಯದಲ್ಲಿ ಬೇರೂರದೆ ಇರುವುದು ಕೂಡ ಕಾರಣ ಆಗಿರಬಹುದು.

ಬಾಲಿವುಡ್ ನಲ್ಲಿ ಜನಪ್ರಿಯ ಗಾಯಕರಾಗಿದ್ದ ಸೋನು ನಿಗಂ ಒಂದು ಹಂತಕ್ಕೆ ಬಂದಾಗ ಸಾಮಾನ್ಯ ಗಾಯಕರ ಸಾಲಿಗೆ ಸೇರಿಬಿಟ್ಟರು. ಜನರಿಗೆ ಅವರ ಧ್ವನಿ ನಿತ್ಯ ಕೇಳಿ ಕೇಳಿ ಸಾಕೆನಿಸಿತ್ತು. ತಾನು ಮೂಲೆಗುಂಪಾಗುವ ಅಪಾಯ ಅರಿತ ಸೋನು ನಿಗಂ, ಕನ್ನಡ ಚಿತ್ರರಂಗದ ಕಡೆ ಚಿತ್ತ ಹರಿಸಿದ್ದರು. ಆಗಷ್ಟೇ ಮುಂಗಾರು ಮಳೆ ಸಿನಿಮಾ ಸಿದ್ಧಗೊಂಡು ಆ ಚಿತ್ರದ ಹಲವು ಹಾಡುಗಳಿಗೆ ಸೋನು ದನಿಯಾದರು. ಕನ್ನಡದಲ್ಲಿ ಅನಿರೀಕ್ಷಿತ ಹಾಗೂ ಅಭೂತಪೂರ್ವ ಯಶಸ್ಸು ಕಂಡ ಸೋನು ತಮ್ಮ ಹಾದಿ ಗಟ್ಟಿಗೊಳಿಸಿದರು. ಮತ್ತೆ ಚಾಲ್ತಿಗೆ ಬಂದರು. ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯನ್ನು ಈ ಹಿನ್ನೆಯಲ್ಲಿಯೂ ನೋಡಬಹುದು.

ಕಡೆಗಣನೆ ಬಿಜೆಪಿಯ ಕೆಟ್ಟ ಗುಣ. ಅದಕ್ಕೆ ಬಿಜೆಪಿಯಲ್ಲಿ ದೊಡ್ಡ ಇತಿಹಾಸವೇ ಇದೆ. ವಾಜಪೇಯಿ, ಮುರುಲಿ ಮನೋಹರ ಜೋಶಿ, ಅಡ್ವಾಣಿ ಅವರ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ಅದು ಸುಲಭವಾಗಿ ಅರ್ಥವಾಗುತ್ತದೆ. ರಾಜಕೀಯ ಮುತ್ಸದ್ದಿತನಕ್ಕೆ ಬಿಜೆಪಿಯಲ್ಲಿ ಬೆಲೆ ಇಲ್ಲ. ಸುಬ್ರಮಣಿಯನ್ ಸ್ವಾಮಿ ಮಾತು ಎಷ್ಟು ಮೌಲ್ಯಯುತವಾದದ್ದಾದರೂ ಅದಕ್ಕೆ ಬಿಜೆಪಿ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಮೌಲ್ಯ ಬಿಜೆಪಿಯ ಅಗತ್ಯವೇ ಅಲ್ಲ ಎನ್ನುವುದನ್ನು ಪಕ್ಷದಲ್ಲಿರುವ ಅಧಿಕಾರದಾಹಿ ರಾಜಕಾರಣಿಗಳು ಸಾಬೀತುಪಡಿಸುತ್ತಿದ್ದಾರೆ. ಹಾಗೂ ಅಧಿಕಾರದಾಹಿ ರಾಜಕಾರಣವನ್ನು ಬೆಳೆಸುವ, ಪಕ್ಷವನ್ನೇ ಹಾಗೆ ರೂಪಿಸುವ ಎಲ್ಲಾ ಪ್ರಯತ್ನಗಳನ್ನು ಬಿಜೆಪಿಯ ಪ್ರಸ್ತುತ ತಲೆಗಳು ಮಾಡಹೊರಟಿವೆ. ವಾಸ್ತವದಲ್ಲಿ ಇದು ಬಿಜೆಪಿ ತನ್ನ ನಿರ್ನಾಮಕ್ಕೆ ಬರೆಯುತ್ತಿರುವ ಮುನ್ನುಡಿ ಎಂದೇ ಹೇಳಬಹುದು.

ಬರಹ :-ಭೂಮಿಸುತ

Leave a Reply

error: Content is protected !!