ಕೊಪ್ಪಳ: ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮೇ 26ರಂದು ಕಾಲೇಜು ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ಜಾಗೃತಿ ಮೂಡಿಸಲಾಯಿತು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕ ಆರೋಗ್ಯಾಧಿಕಾರಿಗಳು, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ “ನಮಗೆ ಆಹಾರ ಬೇಕು ತಂಬಾಕು ಅಲ್ಲ” ಘೋಷವಾಕ್ಯನ್ನೊಳಗೊಂಡು ತಂಬಾಕು ಸೇವನೆಯಿಂದ ಆರೋಗ್ಯ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಆರೋಗ್ಯ ಶಿಕ್ಷಣ ನೀಡುವ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಸಲಹೆಗಾರರಾದ ಡಾ.ಗುರುಪ್ರಸಾದ ಅವರ ಪ್ರಾಸ್ತವಿಕವಾಗಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ 31 ಮೇ ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ. ತಂಬಾಕು ಸೇವನೆಯಿಂದ ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಕುರಿತಾದ ಸಂಪೂರ್ಣ ಮಾಹಿತಿಯನ್ನು ಮತ್ತು ತಂಬಾಕು ಸೇವನೆ ಬದಲಾಗಿ ಪೌಷ್ಠಿಕ ಆಹಾರ ಸೇವನೆಯಿಂದ ಆಹಾರದ ಮೇಲೆ ಉಂಟಾಗುವ ಲಾಭಗಳ ಕುರಿತು ವಿವರಿಸಿದರು. ಈ ವರ್ಷದ ಘೋಷವಾಕ್ಯದಂತೆ ಕಾಲೇಜು ವಿದ್ಯಾರ್ಥಿಗಳು “ನಮಗೆ ಆಹಾರ ಬೇಕು ತಂಬಾಕು ಅಲ್ಲ” ಕುರಿತು ತಮ್ಮ ಸ್ನೇಹಿತರಿಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಆಸ್ಪತ್ರೆಯ ಸೈಕಾಲಾಜಿಸ್ಟ್ ಶಾಂತಮ್ಮ ಕಟ್ಟಿಮನಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಂಬಾಕು ಸೇವನೆಗೆ ಯುವಕರು ಬಲಿಯಾಗುತ್ತಿದ್ದು, ಈ ವರ್ಷ ಮೇ 31 ರಂದು “ವಿಶ್ವ ತಂಬಾಕು ರಹಿತ ದಿನಾಚರಣೆ” ಅಂಗವಾಗಿ ಇಂದಿನ ಯುವಕರು ನಾಳಿನ ಪ್ರಜೆಗಳು ಆ ಹಿನ್ನಲೆಯಲ್ಲಿ ಪೌಷ್ಠಿಕ ಆಹಾರವನ್ನು ಸೇವಿಸಿ ತಂಬಾಕನ್ನಲ್ಲ ಮತ್ತು ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳ ಕುರಿತು ವಿವರಿಸಿದರು. ಹಾಗೂ ಪ್ರತ್ಯಕ್ಷ ಧೂಮಪಾನ ಮತ್ತು ಪರೋಕ್ಷ ಧೂಮಪಾನದಿಂದ ಆರೋಗ್ಯದ ಮೇಲಾಗುವ ಅದರಲ್ಲಿ ಗರ್ಭಿಣಿ ಮಹಿಳೆಯರಲ್ಲಿ ಕಡಿಮೆ ತೂಕದ ಮಗು ಜನನ, ಅಕಾಲಿಕ ಮರಣ, ಅವಧಿಗೆ ಮುಂಚೆ ಜನನ ಈ ಎಲ್ಲಾ ತೊಂದರೆಗಳು ಪರೋಕ್ಷ ಧೂಮಪಾನದಿಂದ ಉಂಟಾಗುತ್ತವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ಅವರು ಮಾತನಾಡಿ, ತಂಬಾಕು ಸೇವನೆಯಿಂದ ಆರೋಗ್ಯ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ನೀಡಲು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಂಬಾಕು ಸೇವನೆಯಿಂದ ದೂರವಿರಬೇಕು ಪೌಷ್ಠಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅದರಿಂದ ತಂಬಾಕಿನಿಂದ ದೂರವಿದ್ದು ಯುವ ಪೀಳಿಗೆಯನ್ನು ರಕ್ಷಿಸಿಕೊಳ್ಳಬೇಕು. ತಂಬಾಕಿನ ಬಗೆಗಿನ ಸತ್ಯಾಂಶಗಳು ಮತ್ತು ವಿಶ್ವದಾದ್ಯಂತ ತಂಬಾಕು ಸೇವನೆಯಿಂದ ಮತ್ತು ಧೂಮಪಾನದಿಂದ ಬರಬಹುದಾದಂತಹ ಖಾಯಿಲೆಗಳ ಬಗ್ಗೆ ಮತ್ತು ತಂಬಾಕು ವಸ್ತುಗಳಲ್ಲಿ 7000 ರಾಸಾಯನಿಕ ವಸ್ತುಗಳಿದ್ದು ಅದರಲ್ಲಿ 69 ರಷ್ಟು ಕ್ಯಾನ್ಸರ್ ಕಾರಕ ವಸ್ತುಗಳಿರುವುದನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಇದೇ ಸಂದರ್ಭದಲ್ಲಿ ಏರ್ಪಡಿಸಲಾಯಿತು.