ಕೊಪ್ಪಳ: ಕೊಪ್ಪಳ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು, ಬೀದಿ ದೀಪ ಅಳವಡಿಕೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದ್ರೆಶ ಬಾಬು ಅವರು ತಿಳಿಸಿದ್ದಾರೆ.
ವಿವಿಧ ಹಣಕಾಸು ಯೋಜನೆಗಳು, ಕುಡಿಯುವ ನೀರಿನ ಯೊಜನೆ, ಸಕಾಲ, ಬಾಕಿ ವಸೂಲಾತಿ ಮತ್ತು ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜೂನ್ 2ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಮಳೆಗಾಲ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಿತಿಗಳನ್ನು ರಚಿಸಲಾಗಿದೆ. ಕಾಲಕಾಲಕ್ಕೆ ಈ ಸಮಿತಿಯಿಂದ ಸಭೆಗಳನ್ನು ನಡೆಸಿ ಮಳೆಗಾಲ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿಂದ ನಡೆದ ಸಭೆಗಳಲ್ಲಿ ನಿರ್ದೇಶನ ನೀಡಿದಂತೆ ಮಳೆಗಾಲ ಆರಂಭ ಮುನ್ನ ಚರಂಡಿ ಶುಚಿತ್ವ ಮತ್ತು ಹೂಳೆತ್ತುವ ಕಾರ್ಯವನ್ನು ವೇಗಗೊಳಿಸಬೇಕು. ಮಳೆಗಳು ಆರಂಭವಾದಾಗ ಎಲ್ಲಿಯೂ ಸಹ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ವಿಪರೀತ ರೀತಿಯಲ್ಲಿ ಮಳೆಗಳು ಸುರಿದಲ್ಲಿ ಅದರಿಂದಾಗುವ ತೊಂದರೆಗಳಿಗೆ ಕೂಡಲೇ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು. ಈ ದಿಶೆಯಲ್ಲಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರು ಮತ್ತು ಜೆಸಿಬಿ ಚಾಲಕರು ಸೇರಿದಂತೆ ಇನ್ನೀತರರನ್ನೊಳಗೊಂಡು ಕ್ಷೀಪ್ರ ಕಾರ್ಯಾಚರಣೆ ತಂಡಗಳನ್ನು ರಚಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಮಳೆಯಿಂದಾಗಿ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಮನೆಗಳಿಗೆ ಹಾನಿಯಾದಲ್ಲಿ ಕೂಡಲೇ ಸಂಬAಧಿಸಿದ ಎಂಜಿನಿಯರ್ ಅವರಿಂದ ಪರಿಶೀಲಿಸಿ ಹಾನಿಯಾದ ಪ್ರಮಾಣದ ಬಗ್ಗೆ ಅಯಾ ತಹಸೀಲ್ದಾರ ಅವರಿಗೆ ಪರಿಹಾರ ಕ್ರಮಕ್ಕಾಗಿ ವರದಿ ಸಲ್ಲಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅರ್ಹರಿಗೆ ಮನೆ ಹಂಚಿಕೆ ಪ್ರಕ್ರಿಯೆಯನ್ನು ಸಹ ಚುರುಕುಗೊಳಿಸಿ ಆಯಾ ಸ್ಥಳೀಯ ಸಂಸ್ಥೆಗಳಿಗೆ ನಿಗದಿಪಡಿಸಿದ ಗುರಿ ಸಾಧನೆಗೆ ಸಹ ಒತ್ತು ಕೊಡಬೇಕು. ನಿವೇಶನಗಳ ಹಂಚಿಕೆಯ ಬಗ್ಗೆ ಸಮಿತಿಯಲ್ಲಿ ಚರ್ಚಿಸಿ ಸರ್ಕಾರದ ಮಾರ್ಗಸೂಚಿಯನ್ವಯ ನಿಯಮಾನುಸಾರ ಹಂಚಿಕೆ ಮಾಡಲು ಬೇಗನೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಪೂರ್ವ ಮುಂಗಾರು ಈಗಾಗಾಲೇ ಆರಂಭಗೊAಡಿದ್ದು ಮಳೆಯಿಂದಾಗಿ ಖಾಲಿ ನಿವೇಶನಗಳಲ್ಲಿ ಸಾಕಷ್ಟು ನೀರು ನಿಂತು ಅದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗೆ, ಚಿಕೂನ್‌ಗುನ್ಯದಂತಹ ಕಾಯಿಲೆಗಳಿಗೆ ಜನರು ತುತ್ತಾಗದ ಹಾಗೆ ಖಾಲಿ ನಿವೇಶನಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಡಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಸರ್ಕಾರದ ಮಾರ್ಗಸೂಚಿಯನುಸಾರ ಕೈಗೊಂಡು ಅವುಗಳನ್ನು ಪೂರ್ಣಗೊಳಿಸಿ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಆಯಾ ನಗರ ಸ್ಥಳೀಯ ಸಂಸ್ಥೆಗಳು ವಿವಿಧ ಯೋಜನೆಗಳಡಿ ನಿಗದಿಪಡಿಸಿದ ಗುರಿಯನುಸಾರ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಆಯ್ಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಸಕಾಲ ಅರ್ಜಿಗಳನ್ನು ಬೇಗನೇ ವಿಲೇಗೊಳಿಸಬೇಕು. ಹಂತವಾರು ಮನೆಗಳ ನಿರ್ಮಾಣ ಕಾರ್ಯವನ್ನು ವೇಗಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಭೆಯಲ್ಲಿ ಕೊಪ್ಪಳ ನಗಾರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯರಾಣಿ ಕೆ.ವಿ. ಹಾಗೂ ಇನ್ನೀತರ ನಗರಸಭೆಗಳ ಪೌರಾಯುಕ್ತರು, ಪುರಸಭೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಹಾಗೂ ಇನ್ನೀತರ ಅಧಿಕಾರಿಗಳು ಇದ್ದರು.