ಬೆಂಗಳೂರು : ಈಗಾಗಲೇ ತೆರೆದ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಗೆ ಟೆಂಡರ್ ಕರೆಯಲು ಹೇಳಲಾಗಿದೆ. ಇದರ ಮಧ್ಯೆ ನಾವು ವಚನ ಮಾಡಿದಂತೆ ಜುಲೈ.1ರಿಂದ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಇದೀಗ ಐದು ಕೆಜಿ ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ. ಅದರ ಜೊತೆಗೆ ಐದು ಕೆಜಿ ನಾವು ಕೊಡುತ್ತೇವೆ ಎಂದಿದ್ದೆವು. ಹಿಂದೆ 7 ಕೆಜಿ ಅಕ್ಕಿ ಕೊಡುತ್ತಿದ್ದೆವು. 10 ಕೆಜಿ ಕೊಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಐದು ಕೆಜಿ ಅಕ್ಕಿ ಜೊತೆಗೆ, ಐದು ಕೆಜಿ ಅಕ್ಕಿಯ ಹಣವನ್ನು ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಘೋಷಣೆ ಮಾಡಿದರು.
ಇಂದು ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಾವು ದುಡ್ಡು ಕೊಡುತ್ತೇವೆ ಅಂದರೂ ನಮಗೆ ಅಕ್ಕಿ ಕೊಡುತ್ತಿಲ್ಲ. ಈಗ ಆಕ್ಷನ್ ಮೂಲಕ ಕೇಂದ್ರ ಸರ್ಕಾರ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ನೋಡಿ ಹೇಗೆ ಅವರ ದುರುದ್ದೇಶವಿದೆ. ಅವರ ಬಳಿ ಯಥೇಚ್ಚವಾಗಿ ಅಕ್ಕಿ ಇದೆ ಅಂತ ಗೊತ್ತಾಗುತ್ತಿದೆ. ಬಡವರ ಕಾರ್ಯಕ್ರಮಕ್ಕೆ ಕಲ್ಲು ಹಾಕುವಂತ ಕೆಲಸವನ್ನು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಗುಡುಗಿದರು.
ಈ ಹಿನ್ನಲೆ ಅಕ್ಕಿ ಬದಲಾಗಿ ಇಂದಿನ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಹಣ ನೀಡಲು ತೀರ್ಮಾನಿಸಲಾಗಿದೆ. 5 ಕೆಜಿ ಅಕ್ಕಿಯ ಜೊತೆಗೆ, 5 ಕೆಜಿ ಅಕ್ಕಿಗೆ ಹಣವನ್ನು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಪಡಿತರ ಚೀಟಿದಾರರಿಗೆ ಜುಲೈ.1 ರಿಂದಲೇ 5 ಕೆಜಿ ಅಕ್ಕಿ ಹಾಗೂ ಕುಟುಂಬದ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿಯಂತೆ 34 ರೂ. ದರದಲ್ಲಿ ಹಣವನ್ನು ಖಾತೆಗೆ ನೇರವಾಗಿ ಹಾಕಲಾಗುತ್ತದೆ ಎಂದು ತಿಳಿಸಿದರು.