ಕೊಪ್ಪಳ : ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ಕೆಲವು ಹಳ್ಳಿಗಳಲ್ಲಿ ಹಾಗೂ ಇತರೆ ಜನ ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಜಿಲ್ಲೆಯ ಜನ ವಸತಿ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ನೀರು ಪೂರೈಸಲಾಗುತ್ತದೆ. ದುರಸ್ತಿ ಮಾಡಬೇಕಾದ ಘಟಕಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ.
ಗಂಗಾವತಿ, ಕನಕಗಿರಿ, ಕೊಪ್ಪಳ ಹಾಗೂ ಕುಷ್ಟಗಿ ತಾಲೂಕಿನ 04 ಗ್ರಾಮಗಳಲ್ಲಿ 12 ಟ್ಯಾಂಕರಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಹಾಗೂ ಇತರೆ 13 ಗ್ರಾಮಗಳಿಗೆ 14 ಖಾಸಗಿ ಬೋರವೆಲ್ ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. 2023-24ನೇ ಸಾಲಿನ ತುರ್ತು ಕುಡಿಯುವ ನೀರಿನ ಯೋಜನೆಯಡಿ ಜಿಲ್ಲೆಯ 07 ತಾಲೂಕುಗಳ ವಿವಿಧ ಜನವಸತಿ ಪ್ರದೇಶಗಳಲ್ಲಿ ಈಗಾಗಲೇ ಒಟ್ಟು 108 ಹೊಸ ಬೋರವೆಲ್ ಗಳನ್ನು ಕೊರೆಯಿಸಿ, ಸಮರ್ಪಕ ಕುಡಿಯುವ ನೀರು ಪೂರೈಕೆಯ ಬಗ್ಗೆ ಕ್ರಮ ವಹಿಸಲಾಗಿದೆ ಎಂಬ ಮಾಹಿತಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸಲ್ಲಿಸಿದ್ದಾರೆ ಎಂದು ಸಿಇಓ ತಿಳಿಸಿದ್ದಾರೆ.