ಕನಕಗಿರಿ : ಇತ್ತೀಚಿಗೆ ಸಂಸದ ಸಂಗಣ್ಣ ಕರಡಿ ಅವರ ರಾಜಕೀಯ ನಡೆ ಭಾರೀ ಕುತೂಹಲ ಎಬ್ಬಿಸಿತ್ತು. ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಹೋಗುತ್ತಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು, ಇದೀಗ ಈ ವಿಚಾರಕ್ಕೆ ಸಂಗಣ್ಣ ಕರಡಿ ಪ್ರತಿಕ್ರಿಯೆ ನೀಡಿದ್ದು, “ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಹೋಗುತ್ತಾರೆ ಎಂಬ ಸುದ್ದಿ ಸುಳ್ಳು. ಸತ್ಯಕ್ಕೆ ದೂರವಾದ ಮಾತು ಇದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕನಕಗಿರಿಯ ಕಾರ್ಯಕ್ರಮದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, “ನನ್ನ ರಾಜಕೀಯ ಗುರುವಾಗಿದ್ದ ಗಂಗಾವತಿಯ ಹೆಚ್.ಜಿ. ರಾಮುಲು ಅವರ ಮನೆಗೆ ಹೋಗಿ ಕುಶಲೋಪರಿ ವಿಚಾರಿಸುತ್ತೇನೆ ಹಾಗೂ ಇದನ್ನೇ ಕೆಲ ಮಾಧ್ಯಮಗಳು ಊಹಿಸಿ ಬಿಜೆಪಿ ಪಕ್ಷದ ಬಿಟ್ಟು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಸುದ್ದಿ ಮಾಧ್ಯಮ ಪ್ರಕಟಿಸಿರುವುದು ಸತ್ಯಕ್ಕೆ ದೂರವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಇದೆ. ಬಿಜೆಪಿ ಪಕ್ಷದಲ್ಲಿ ಹಲವರು ಆಕಾಂಕ್ಷಿಗಳಿದ್ದು, ಅದರಲ್ಲಿ ನಾನು ಸಹ ಒಬ್ಬ. ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತೋ ಅವರ ಪರವಾಗಿ ಕೆಲಸ ಮಾಡುವೆ” ಎಂದು ಹೇಳಿದ್ದಾರೆ.