ರಾಯಚೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಾದ “ಗೃಹಲಕ್ಷ್ಮಿ ಯೋಜನೆ” ನೋಂದಣಿಗೆ 200 ರಿಂದ 300 ರೂ.ಗಳ ಶುಲ್ಕ ವಸೂಲಿ ಮಾಡುತ್ತಿದ್ದ ನಗರದ 3 ಸೈಬರ್ ಕೇಂದ್ರಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಬೀಗ ಜಡಿದ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.
ಜಿಲ್ಲೆಯ ಸ್ಥಳೀಯ ಸೈಬರ್‌ಗಳು ಗ್ರಾಮ ಒನ್ ಕೇಂದ್ರದ ಐಡಿ, ಪಾಸ್‌ವರ್ಡ್ ಬಳಸಿಕೊಂಡು ಮಹಿಳೆಯರಿಂದ ಹಣ ವಸೂಲಿ ಮಾಡುತ್ತಿದ್ದ ಸೈಬರ್ ಕೇಂದ್ರಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಮೊಬೈಲ್‌ಗೆ ಮೆಸೇಜ್ ಬಂದಿರದಿದ್ದರೂ ನೋಂದಣಿ ಮಾಡುವುದಾಗಿ ಹೇಳಿ ಕೆಲ ಮಹಿಳೆಯರಿಂದ ಹಣ ವಸೂಲಿ ನಡೆಸಿದ್ದರು ಎಂದು ತಿಳಿದು ಬಂದಿದೆ. ಈ ಯೋಜನೆಯಡಿಯಲ್ಲಿ ನೋಂದಣಿ ಮಾಡಿ ರಸೀದಿಯನ್ನು ಕೊಡಲಾಗುತ್ತಿತ್ತು. ಮಾನ್ವಿ ತಹಶಿಲ್ದಾರ್ ಎಲ್.ಡಿ.ಚಂದ್ರಕಾಂತ್ ನೇತೃತ್ವದ ತಂಡ ದಾಳಿ ನಡೆಸಿದ್ದು, ನಗರದ ಎಕ್ಸೆಲ್ ಕಂಪ್ಯೂಟರ್ಸ್, ಲಕ್ಷ್ಮಿ ಕಂಪ್ಯೂಟರ್, ಸೂರ್ಯ ಕಂಪ್ಯೂಟರ್ ಕೇಂದ್ರಗಳಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಈ ಬಗ್ಗೆ ಸೈಬರ್ ಕೇಂದ್ರದ ಮಾಲೀಕರ ವಿರುದ್ಧ ಅಧಿಕಾರಿಗಳು ಮಾನ್ವಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.