ಕುಕನೂರು : ಭಾವೈಕ್ಯತೆಯ ನಾಡು ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಹಿಂದೂ ವೀರಶೈವ ಶ್ರೀಗಳಿಂದ ನೂತನ ಮಸೀದಿ ಉದ್ಘಾಟನೆ ಗೊಳ್ಳುವ ಮೂಲಕ ಮಾನವ ಧರ್ಮದ ನಿಜವಾದ ಸಾಮರಸ್ಯ, ಭಾವೈಕ್ಯದ ಸಂದೇಶ ಸಾರಲಾಯಿತು.
ಕುಕನೂರು ಪಟ್ಟಣದ ಕೋಳಿ ಪೇಟೆಯ ಕಿಲ್ಲೆದ ಓಣಿಯಲ್ಲಿ ನೂತನವಾಗಿ ನಿರ್ಮಾಣವಾದ ಮಸೀದಿಯನ್ನು ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ಕುಕನೂರು ಪಟ್ಟಣದ ಅಭಿನವ ಅನ್ನದಾನಿಶ್ವರ ಸ್ವಾಮೀಜಿಗಳು ಮತ್ತು ಮುಸ್ಲಿಂ ಧರ್ಮಗುರು ಹಜರತ್ ಮಹ್ಮದ್ ಅಲಿ ಅವರಿಂದ ಉದ್ಘಾಟನೆಗೊಂಡಿತು.
ಈ ಮೂಲಕ ಭಾವೈಕ್ಯತೆಗೆ ಹೆಸರಾದ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಹಿಂದೂ ಶ್ರೀಗಳು ಮತ್ತು ಮುಸ್ಲಿಂ ಧರ್ಮಗುರುಗಳಿಂದ ಶಾಂತಿ, ಸಾಮರಸ್ಯ, ಭಾವೈಕ್ಯತೆಯ ಸಂದೇಶ ಸಾರಲಾಯಿತು. ಸಂದರ್ಭದಲ್ಲಿ ಮುಸ್ಲಿಂ ಮತ್ತು ಹಿಂದೂಗಳು ಒಟ್ಟಿಗೆ ಸೇರಿ ಶ್ರೀಗಳಿಗೆ ಪಾದಪೂಜೆ ಸಲ್ಲಿಸಲಾಯಿತು. ಎಲ್ಲ ಧರ್ಮಕ್ಕಿಂತಲೂ ಮಾನವ ಧರ್ಮವೇ ಶ್ರೇಷ್ಠ, ಹಿಂದೂ ಮುಸ್ಲಿಂ ಸೇರಿದಂತೆ ನಾವೆಲ್ಲರೂ ಒಂದೇ ಎಂಬ ಘೋಷವಾಕ್ಯ ಮೊಳಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಭಿನವ ಅನ್ನದಾನಿಶ್ವರ ಶ್ರೀಗಳು, ಹಿಂದೂ ಮುಸಲ್ಮಾನರೆಲ್ಲರೂ ಅಣ್ಣ ತಮ್ಮರಂತೆ, ಇವತ್ತಿಗೂ ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆ ಊರುಗಳಲ್ಲಿ ನಡೆಯುವ ದಾಸೋಹದ ಉಸ್ತುವಾರಿಯನ್ನು ಮುಸ್ಲಿಂ ಧರ್ಮಕ್ಕೆ ಸೇರಿದವರೇ ನೋಡಿಕೊಳ್ಳುತ್ತಿದ್ದಾರೆ, ಹಿಂದೂ ಜಾತ್ರೆಯಲ್ಲಿ ಮುಸಲ್ಮಾನರು ಭಾಗವಹಿಸಿದರೆ, ಮೊಹರಂ ಆಚರಣೆಯಲ್ಲಿ ಹಿಂದೂಗಳು ಭಾಗವಹಿಸುತ್ತಾರೆ ನಮ್ಮದು ಜಾತ್ಯತೀತ ನಾಡು ಎಲ್ಲ ಧಾರ್ಮಿಯರು ಇಲ್ಲಿ ಸಹೋದರರಿದ್ದಂತೆ, ಶ್ರಾವಣ ಮಾಸದ ಹಿಂದೂಗಳ ದಾಸೋಹ, ಪ್ರಸಾದಕ್ಕೆ ಮುಸ್ಲಿಂಮರು ಸೇವೆ ಸಲ್ಲಿಸುತ್ತಾರೆ, ಮುಸ್ಲಿಮರ ರಂಜಾನ್ ಮಾಸದಲ್ಲಿ ಹಿಂದೂಗಳು ಸೇವೆ ಸಲ್ಲಿಸುತ್ತಾರೆ ನಮ್ಮದು ಜಾತ್ಯತೀತ ನಾಡು ಎಂದು ಅಭಿನವ ಅನ್ನದಾನಿಶ್ವರ ಶ್ರೀಗಳು ಆಶೀರ್ವಚಿಸಿದರು.
ಈ ಸಂದರ್ಭದಲ್ಲಿ ರಾಮಣ್ಣ ಮುಂದಿನಮನಿ, ಕಳಕಪ್ಪ ಬೋರಣ್ಣವರ, ಬರಮಪ್ಪ ತಳವಾರ್, ಮೌಲಾಸಾಬ್ ಮುಜಾವರ್, ಹುಸೇನ್ ಸಾಬ್ ಕಂದಗಲ್, ಬಸವರಾಜ್ ಕುರಿ, ಹನುಮಂತಪ್ಪ ಹಂಪನಾಲ್ ಸೇರಿದಂತೆ ಅನೇಕ ಹಿಂದೂ ಮುಸ್ಲಿಂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ವರದಿ : ಈರಯ್ಯ ಕುರ್ತಕೋಟಿ