ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ “ಗೃಹಲಕ್ಷ್ಮೀ ಯೋಜನೆ”ಯ ನೋಂದಣಿ ಪ್ರಕ್ರಿಯೆ ಮತ್ತಷ್ಟು ಸುಲಭವಾಗಿದ್ದು, ಅರ್ಹ ಫಲಾನುಭವಿಗಳು ನೇರವಾಗಿ ನೋಂದಣಿ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, “ಅರ್ಹ ಯಜಮಾನಿ ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಇದೀಗ ಮತ್ತಷ್ಟು ಸರಳಗೊಂಡಿದ್ದು, ಇದಕ್ಕೂ ಮೊದಲು ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ ಬಂದು ಅದರಲ್ಲಿನ ಬಂದ ದಿನಾಂಕದಂದು ನೋಂದಣಿ ಕೇಂದ್ರಗಳಿಗೆ ತೆರಳಬೇಕಿತ್ತು. ಆದರೆ, ಈಗ ಎಸ್‌ಎಂಎಸ್‌ಗೆ ಕಾಯಬೇಕಿಲ್ಲ, ನೇರವಾಗಿ ಹೋಗಿ ನೋಂದಣಿ ಮಾಡಿಸಕೊಳ್ಳಬಹುದು ಎಂದರು.
ನಿನ್ನೆ 5,28,051 ಮಹಿಳೆಯರು ನೋಂದಣಿ ಮಾಡಿಸಿದ್ದು, ಒಟ್ಟಾರೆ ಇದುವರೆಗೂ 55,89,865 ಮಹಿಳೆಯರು ಅರ್ಜಿ ಸಲ್ಲಿಸಿದಂತಾಗಿದೆ. ಯೋಜನೆಯಡಿಯಲ್ಲಿ ನೋಂದಣಿ ಮಾಡಲು ಯಾರಾದರೂ ಹಣ ಪಡೆದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದರು.