ಕುಕನೂರ : ‘ಇದು ಸರ್ಕಾರಿ ಕಾರ್ಯಕ್ರಮ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ’ ಎಂದು ಶಾಸಕ ಬಸವರಾಜ ರಾಯರೆಡ್ಡಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಇಂದು ಕುಕನೂರ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಸರ್ಕಾರದ ಗೃಹ ಜ್ಯೋತಿ, ಗೃಹ ಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳ ಚಾಲನಾ ಸಮಾರಂಭವನ್ನು ಶಾಸಕ ಬಸವರಾಜ ರಾಯರೆಡ್ಡಿ ಉದ್ಟಾಟಿಸಿದರು. ಇದಕ್ಕೂ ಮುನ್ನ ಕಾರ್ಯಕ್ರಮದ ವೇದಿಕೆ ಏರುತ್ತಲೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೊರ್ವ ಸರ್ಕಾರಿ ಕಾರ್ಯಕ್ರಮದ ನಿರೂಪಣೆ ಮಾಡುತ್ತಿರುವುದನ್ನು ಗಮನಿಸಿದ ಅವರು, ತಕ್ಷಣವೇ ನಿರೂಪಕನ ಬಳಿ ಬಂದು ಮೈಕ್ ಕಸಿದುಕೊಂಡು, ‘ಇದು ಸರ್ಕಾರಿ ಕಾರ್ಯಕ್ರಮ, ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ’ ಎಂದು ಕಿವಿಮಾತು ಹೇಳಿದರು.
ಈ ಬಳಿಕ ವೇದಿಕೆ ಮೇಲೆ ಇದ್ದ ತಾಲೂಕಾ ಮಟ್ಟದ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು. ‘ಇದು ಸರ್ಕಾರಿ ಕಾರ್ಯಕ್ರಮ ಹಾಗಾಗಿ ಎಲ್ಲಾ ರೀತಿಯಲ್ಲಿ ಅಧಿಕಾರಿಗಳ ಜವಾಬ್ದಾರಿ ಇರುತ್ತದೆ. ಈ ಕಾರ್ಯಕ್ರಮವನ್ನು ನಡೆಸಿಕೊಡಬೇಕಾದದ್ದು ಅಧಿಕಾರಿಗಳ ಜವಾಬ್ದಾರಿ, ಈ ರೀತಿ ಮಾಡುವುದರಿಂದ ರಾಜಕೀಯವಾಗಿ ಇಂತಹ ವಿಷಯದಲ್ಲಿ ಟೀಕೆ ಟಿಪ್ಪಣಿಗಳು ನನ್ನ ವಿರುದ್ಧ ಬರುತ್ತವೆ ಹಾಗಾಗಿ ಇನ್ಮುಂದೆ ಈ ತರ ಆದರೆ, ಸೂಕ್ತ ಕ್ರಮ ತಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.