LOCAL EXPRESS : ‘ದಯಮಾಡಿ ಬನ್ನಿ’ ಎಂದು ನಿರೂಪಕನ ಗೋಗರೆತ : ಅಧಿಕಾರಿಗಳ ವಿರುದ್ಧ ಶಾಸಕರ ಸಿಡಿಮಿಡಿ..!!

You are currently viewing LOCAL EXPRESS : ‘ದಯಮಾಡಿ ಬನ್ನಿ’ ಎಂದು ನಿರೂಪಕನ ಗೋಗರೆತ : ಅಧಿಕಾರಿಗಳ ವಿರುದ್ಧ ಶಾಸಕರ ಸಿಡಿಮಿಡಿ..!!

ಕುಕನೂರು : ‘ಸರ್ಕಾರಿ ಕಾರ್ಯಕ್ರಮದಲ್ಲಿ ಖಾಸಗಿ ಕಾರ್ಯಕ್ರಮದಂತೆ ದಯಮಾಡಿ ಬನ್ನಿ ದಯಮಾಡಿ ಬನ್ನಿ’ ಎಂದು ಗೋಗರೆದ ನಿರೂಪಕನಿಗೆ ಮೈಕ್ ಕಸಿದುಕೊಂಡು ‘ಈ ರೀತಿ ಹೇಳಬೇಡಿ, ಇದೊಂದು ಸರ್ಕಾರಿ ಕಾರ್ಯಕ್ರಮ, ವಯಕ್ತಿಕ ಕಾರ್ಯಕ್ರಮವಲ್ಲ ಬರೋರು ಬರ್ತಾರೆ, ಅಷ್ಟೊಂದು ಅಂಗಲಾಚಿ ಹೇಳುವ ಅಗತ್ಯವಿಲ್ಲ ಎಂದು ಹೇಳಿದ ಶಾಸಕ ಬಸವರಾಜ್ ರಾಯರಡ್ಡಿ ಅವರು ಈ ಕುರಿತಂತೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಇಂದು ಕುಕನೂರು ಪಟ್ಟಣದಲ್ಲಿ ಪಟ್ಟಣ ಪಂಚಾಯತ್ ಮತ್ತು ತಾಲೂಕು ಆಡಳಿತದಿಂದ ಹಮ್ಮಿಕೊಂಡ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಚಾಲನೆ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ್ ರಾಯರಡ್ಡಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಇದರ ಜೊತೆಗೆ ಕುಕನೂರು ಪಟ್ಟಣ ಪಂಚಾಯತಿಯ ಸದಸ್ಯರನ್ನೂ ಕಾರ್ಯಕ್ರಮಕ್ಕೆ ಅಹ್ವಾನಿಸಲಾಗಿತ್ತು.

ಪಟ್ಟಣ ಪಂಚಾಯತಿಯ 19 ಸದಸ್ಯರಲ್ಲಿ ಕಾಂಗ್ರೆಸ್ ಸದಸ್ಯರು ಮಾತ್ರ ಕಾರ್ಯಕ್ರಮಕ್ಕೆ ಬಂದಿದ್ದರು. ಬಿಜೆಪಿ ಸದಸ್ಯರು ಗೈರು ಆಗಿದ್ದರು. ಸರ್ಕಾರಿ ಕಾರ್ಯಕ್ರಮವಾದರೂ ಬಿಜೆಪಿ ಸದಸ್ಯರು ಕಾರ್ಯಕ್ರಮಕ್ಕೆ ಬರದೇ ಇದ್ದುದು ಎದ್ದು ಕಾಣುತ್ತಿತ್ತು. ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯತಿಯ ಎಲ್ಲ ಸದಸ್ಯರಿಗೆ ಅಹ್ವಾನ ಕೊಡಲಾಗಿದೆ, ಆದರೂ ಕೂಡಾ ಕೆಲವರು ಬಂದಿಲ್ಲ ಎಂದು ಮುಖ್ಯಾಧಿಕಾರಿ ಸುಬ್ರಮಣ್ಯ ಹೇಳಿದರು.

ನಿರೂಪಕರು ಎಷ್ಟೇ ಕರೆದರೂ ಬಿಜೆಪಿ ಸದಸ್ಯರು ಮಾತ್ರ ವೇದಿಕೆಯತ್ತ ಸುಳಿದಿರಲಿಲ್ಲ. ಪಟ್ಟಣ ಪಂಚಾಯತಿಯ ಸದಸ್ಯರು ಸೇರಿದಂತೆ ಉಳಿದ ಗಣ್ಯರು ವೇದಿಕೆ ಮೇಲೆ ಬರಬೇಕೆಂದು ಅದರಲ್ಲೂ ದಯಮಾಡಿ ಬರಬೇಕೆಂದು ಒತ್ತಿ ಒತ್ತಿ ಹೇಳಿದ ನಿರೂಪಕರ ಮಾತಿಗೆ ಶಾಸಕ ರಾಯರಡ್ಡಿ ಅವರು ಸಿಟ್ಟಾದರು. ದಯಮಾಡಿ ಬನ್ನಿ ಎಂದು ಕರೆಯಲು ಇದು ವಯಕ್ತಿಕ ಕಾರ್ಯಕ್ರಮವಲ್ಲ, ಸರ್ಕಾರಿ ಕಾರ್ಯಕ್ರಮ, ಬರೋರು ಬರ್ತಾರೆ, ಬಿಡೋರು ಬಿಡ್ತಾರೆ, ಎಂದು ಹೇಳಿ ವೇದಿಕೆ ಮೇಲಿದ್ದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

‘ಇದು ಕಾಂಗ್ರೆಸ್ ಕಾರ್ಯಕ್ರಮವಲ್ಲ, ಕಾಂಗ್ರೆಸ್ ಕಾರ್ಯಕರ್ತರಿಗೆ ನಿರೂಪಣೆ ಮಾಡಲು ಅವಕಾಶ ಏಕೆ ಕೊಟ್ಟಿರಿ ನೀವೇ ಕಾರ್ಯಕ್ರಮ ನಿರ್ವಹಣೆ ಮಾಡಬೇಕು, ಕಾರ್ಯಕ್ರಮ ಶಿಸ್ತು, ಅಚ್ಚು ಕಟ್ಟಿನಿಂದ ಕೂಡಿರಬೇಕು’ ಎಂದು ಶಾಸಕರು ಸಿಡಿಮಿಡಿಗೊಂಡರು.

Leave a Reply

error: Content is protected !!