ಕೊಪ್ಪಳ : ಜಿಲ್ಲೆಯ ಏಕದಳ ಧಾನ್ಯ ಬೆಳೆಯಲ್ಲಿ ಕಂಟಕವಾಗಬಹುದಾದ ಹೊಸ ಕೀಟ ಪೀಡೆ, ಹುಸಿ ಸೈನಿಕ ಹುಳುವಿನ ನಿರ್ವಹಣಾ ಕ್ರಮಗಳು ಮತ್ತು ಸಾಮೂಹಿಕ ಹತೋಟಿ ಕ್ರಮ ಕೈಗೊಳ್ಳಲು ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ಅವರು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ತಡವಾಗಿ ಬಿತ್ತನೆ ಮಾಡಿದ ಮೆಕ್ಕೆಜೋಳದ ಮೇಲೆ ಹೊಸಕೀಟ ಒಂದು ಕಾಣಿಸಿಕೊಂಡಿತ್ತು. ಈ ಕೀಟವನ್ನು ವಿಜ್ಞಾನಿಗಳು ‘ಫಾಲ್ ಆರ್ಮಿವಾರ್ಮ್’ ಎಂತಲೂ ವೈಜ್ಞಾನಿಕವಾಗಿ “ಸ್ಪೋಡಾಪ್ಟೆರಾ ಫ್ರುಗಿಫರ್ಡಾ” ಎಂದು ಹೆಸರಿಸಿದ್ದಾರೆ. ಮುಂಗಾರಿನಲ್ಲಿ ಈ ಕೀಟದ ಬಾಧೆಯೂ ಇತರೆ ಏಕದಳ ದಾನ್ಯ ಬೆಳೆಗಳ ಮೇಲೆ ಕಂಟಕಪ್ರಾಯವಾಗುವ ಸಾಧ್ಯೆತೆ ಇರುತ್ತದೆ. ಕಾರಣ ರೈತರು ಸಾಮೂಹಿಕ ಹತೋಟಿ ಕ್ರಮವನ್ನು ಕೈಗೊಳ್ಳಲು ಈ ಮೂಲಕ ಕೋರಲಾಗಿದೆ.
*ಕೀಟದ ಪ್ರಮುಖ ಲಕ್ಷಣಗಳು*
ಈ ಕೀಟವು ಕಂದು ಬಣ್ಣದ ಪತಂಗವಾಗಿದ್ದು ರೆಕ್ಕೆಯ ಅಂಚಿನಲ್ಲಿ ಬಿಳಿಯ ಪಟ್ಟಿಗಳನ್ನು ಹೊಂದಿರುತ್ತದೆ. ಕೀಟದ ಜೀವನ ಚಕ್ರವು 30 ರಿಂದ 40 ದಿನಗಳನ್ನು ಹೊಂದಿದ್ದು ಸಾಧಾರಣವಾಗಿ ಸುಮಾರು ಸಾವಿರ ಮೊಟ್ಟೆಗಳನ್ನು ಇಡುವ, ಸುಮಾರು 50 ರಿಂದ 100 ಕಿ.ಮೀ ವರಗೆ ವಲಸೆ ಹೋಗುವ ಶಕ್ತಿ ಹೊಂದಿದೆ. ಈ ಕೀಟವು ತರಕಾರಿ ಬೆಳೆಗಳು, ಭತ್ತ, ಕಬ್ಬು, ಹತ್ತಿ ಹಾಗೂ ಜೋಳ ಬೆಳೆಗಳ ಮೇಲೂ ದಾಳಿಮಾಡುವ ಸಾಧ್ಯತೆ ಇದ್ದು, ಶೇ.40 ರಿಂದ 70 ರಷ್ಟು ಬೆಳೆ ಹಾನಿ ಸಾಧ್ಯತೆ ಇರುತ್ತದೆ.
ನಿಯಂತ್ರಣ ಕ್ರಮಗಳು: ಪ್ರೌಢ ಪತಂಗವು ಮೊಟ್ಟೆಗಳನ್ನು ಗುಂಪಾಗಿ ಇಡುವುದರಿಂದ ಮೊಟ್ಟೆ ಹಾಗು ಮರಿ ಹುಳುಗಳನ್ನು ಆರಿಸಿ ತೆಗೆಯಬೇಕು. ಮರಿಹುಳು ಕಂಡತಕ್ಷಣ ಶೇ.5ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಬೇಕು. ನ್ಯುಮೋರಿಯಾ ರಿಲೇ ಜೈವಿಕ ಕೀಟನಾಶಕವನ್ನು 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಯಿಸಿ ಸಿಂಪಡಿಸಬೇಕು. ಇಮಾಮೆಕ್ಟಿನ್ ಬೆಂಜೋಯೇಟ್ ಶೇ.5ರಷ್ಟು ಎಸ್.ಜಿ 0.4ಗ್ರಾಂ ಅಥವಾ ಸ್ಪೆöÊನೋಸೈಡ್ 45 ಎಸ್.ಸಿ 0.3 ಮಿ.ಲೀ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ವಿಷಪಾಶಾಣದ ಬಳಕೆ, 10 ಕೆ.ಜಿ ತೌಡು, 5 ಕೆ.ಜಿ. ಬೆಲ್ಲ, 4 ರಿಂದ 5 ಲೀಟರ್ ನೀರು ಕಲೆಸಿಟ್ಟು ಮಾರನೆ ದಿನ 100 ಗ್ರಾಂ ಥಯೋಡಿಕಾರ್ಬ್ (ಪ್ರತಿ ಕೆಜಿ ಭತ್ತದ ತೌಡಿಗೆ 10ಗ್ರಾಂ ನಂತೆ) ಕೀಟನಾಶಕ ಮಿಶ್ರಣಮಾಡಿ ಸಂಜೆ 5 ಗಂಟೆಯ ನಂತರ ಬೆಳೆಯ ಸುಳಿಯಲ್ಲಿ ಹಾಕಬೇಕು ಕೀಟನಾಶಕ ಮತ್ತು ವಿಷಪಾಶಾಣವನ್ನು ಸುಳಿಯಲ್ಲಿ ನೀಡಬೇಕು. ವಿಷಪಾಶಾಣ ನೀಡಿದ ಮೆಕ್ಕೆಜೋಳದ ತಾಕಿನಲ್ಲಿ ಜಾನುವಾರುಗಳನ್ನು ಮೇಯಲು ಬಿಡಬಾರದು.
ಈ ಕೀಟ ನಿಯಂತ್ರಣಕ್ಕೆ ಬೇಕಾದ ಔಷಧಿಗಳನ್ನು ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಬಾಂಧವರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.