ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾ.ಪಂ. ಗ್ರಂಥಾಲಯಗಳಲ್ಲಿ ‘ಸ್ವಾತಂತ್ರ್ಯೋತ್ಸವ’ ಆಚರಣೆ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಾರ್ಗಸೂಚನೆ ಪ್ರಕಟಣೆ ಹೊರಡಿಸಿದೆ.
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮಕ್ಕಳು ಓದುವುದರಲ್ಲಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು “ಓದುವ ಬೆಳಕು” ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಸದರಿ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳನ್ನು ವಿಶೇಷವಾಗಿ ಗ್ರಾಮೀಣ ಮಕ್ಕಳನ್ನು ವ್ಯವಸ್ಥಿತವಾಗಿ ಕಲಿಕಾ ಕ್ಷೇತ್ರಕ್ಕೆ ಮರಳಿ ತರುವ ಹಾಗೂ ನಿರಂತರತೆಯನ್ನು ಕಾಪಾಡುವ ಗುರಿಯನ್ನು ಹೊಂದಲಾಗಿದೆ. ಹಾಗಾಗಿ ಗ್ರಂಥಾಲಯಗಳನ್ನು ಗ್ರಾಮೀಣ “ಜ್ಞಾನ ಕೇಂದ್ರ”ಗಳನ್ನಾಗಿಸಲು ಗ್ರಂಥಾಲಯಗಳ ನವೀಕರಣ, ಡಿಜಿಟಲೀಕರಣ ಸೇರಿದಂತೆ ವಿವಿಧ ಕ್ರಮಗಳನ್ನು ರಾಜ್ಯದಲ್ಲಿ ಈಗಾಗಲೇ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಇದರ ಮುಂದುವರೆದ ಭಾಗವಾಗಿ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಹಲವಾರು ಅಭಿಯಾನಗಳ ಮೂಲಕ ಪ್ರತಿ ತಿಂಗಳು ಮಕ್ಕಳಿಗೆ ಉಪಯುಕ್ತ ಚಟುವಟಿಕೆಯನ್ನು ಆಯೋಜಿಸಿ, ಗ್ರಂಥಾಲಯಗಳನ್ನು ಸದುಪಯೋಗಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಅದರಂತೆ, ‘ಆಗಸ್ಟ್-2023’ರ ತಿಂಗಳಲ್ಲಿ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಗ್ರಂಥಾಲಯಕ್ಕೆ ಬರುವ ಮಕ್ಕಳಿಗೆ ಚಟುವಟಿಕೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಆಗಸ್ಟ್-2023 ಮಾಹೆಯ ಪೂರ್ಣ “ಭಾರತ ಸ್ವಾತಂತ್ರ್ಯ ದಿನಾಚರಣೆ” ಸಂಭ್ರಮೋತ್ಸವವನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಲ್ಲಿ ಆಚರಿಸಲು ಕೆಲ ಚಟುವಟಿಕೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
✪ ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳು ಹೀಗಿವೆ ✪
➤ ತ್ರಿವರ್ಣ ಧ್ವಜ ಮತ್ತು ಬ್ಯಾಡ್ ತಯಾರಿಸುವುದು:- ಗ್ರಂಥಾಲಯ ಮೇಲ್ವಿಚಾರಕರು ಆಗಸ್ಟ್ ತಿಂಗಳಿನಲ್ಲಿ ಗ್ರಂಥಾಲಯಕ್ಕೆ ಬರುವ ಎಲ್ಲಾ ಮಕ್ಕಳನ್ನು ಖಾತರಿಪಡಿಸಿಕೊಂಡು, ಅಂತಹ ಮಕ್ಕಳಿಗೆ ತ್ರಿವರ್ಣ ಧ್ವಜ ಮತ್ತು ಬ್ಯಾಡ್ ತಿಳಿಸುವುದು.
➤ ಗ್ರಂಥಾಲಯದಲ್ಲಿ ಮಕ್ಕಳು ಬಣ್ಣಗಳು ಮತ್ತು ಕಾಗದದೊಂದಿಗೆ ಸಮಯ ಕಳೆಯಬೇಕು ಮತ್ತು ತ್ರಿವರ್ಣ ಧ್ವಜ ಹಾಗೂ ಬ್ಯಾಡ್‌ನ್ನು ಬಟ್ಟೆ ಪಿನ್‌ನೊಂದಿಗೆ ತಯಾರಿಸಬೇಕು. ಈ ಬ್ಯಾಡ್‌ನ್ನು ಅವರು ಆಗಸ್ಟ್ 15 ರಂದು ತಮ್ಮ ಶಾಲೆಯ ಧ್ವಜಾರೋಹಣ ಸಮಾರಂಭ ಹಾಗೂ ಆಚರಣೆಗಳಲ್ಲಿ ಧರಿಸಲು ತಿಳಿಸುವುದು.
➤ ಸಂವಿಧಾನದ ಓದು ಅಭಿಯಾನ:- ಸ್ವಾತಂತ್ರ ದಿನಾಚರಣೆಯ ದಿನದಂದು ಸಂವಿಧಾನದ ಮೂಲ ಆಶಯಗಳ ಬಗ್ಗೆ ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಅರಿವು ಮೂಡಿಸಲು ಭಾರತ ಸಂವಿಧಾನದ ಪೀಠಿಕೆ (Preamble) ಯನ್ನು ಸಾಮೂಹಿಕವಾಗಿ ಓದುವಂತೆ ಕ್ರಮವಹಿಸುವುದು.
➤ ಭಾರತ ಸಂವಿಧಾನದ ಪೀಠಿಕೆ (Preamble) ಓದಿಸುವುದು:- ಈ ಪ್ರತಿಯನ್ನು ನೀಡಿ ಮಕ್ಕಳಿಂದ ಬರೆಯಿಸಿ ಅದರ ಸುತ್ತಲೂ ವಿವಿಧ ಬಣ್ಣಗಳಿಂದ ಸುಂದರವಾದ ಚೌಕಟ್ಟನ್ನು ಮಕ್ಕಳಿಂದ ರಚಿಸುವುದು. ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿ ತಾವೇ ರಚಿಸಿದ ಸಂವಿಧಾನದ ಪೀಠಿಕೆಯ ಕಲಾಕೃತಿಯನ್ನು ಪ್ರದರ್ಶಿಸುವಂತೆ ತಿಳಿಸುವುದು.
➤ ದೇಶಭಕ್ತಿ ಗೀತ ಗಾಯನ:- ಗ್ರಂಥಾಲಯ ಮೇಲ್ವಿಚಾರಕರು, ಸ್ವಾತಂತ್ರ್ಯ ದಿನದ ಹಾಡುಗಳು ಹಾಗೂ ದೇಶಭಕ್ತಿ ಗೀತೆಗಳನ್ನು ಅಭ್ಯಾಸ ಮಾಡಲು ಮಕ್ಕಳನ್ನು ಒಟ್ಟುಗೂಡಿಸಬೇಕು. ಇದರಿಂದಾಗಿ ಗುಂಪು ಚಟುವಟಿಕೆಯ ಮೂಲಕ ಮತ್ತು ವೈಯಕ್ತಿಕವಾಗಿ ಮಕ್ಕಳು ಕನ್ನಡದಲ್ಲಿ ಹಾಡುಗಳನ್ನು ಕಲಿಯುತ್ತಾರೆ. ಮಕ್ಕಳು ಕಲಿತ ಹಾಡನ್ನು ಸ್ವಾತಂತ್ರ್ಯ ದಿನದಂದು ಅವರ ಶಾಲೆಗಳಲ್ಲಿ ಅಥವಾ ಗ್ರಂಥಾಲಯದಲ್ಲಿ ಹಾಡಬಹುದು. ಇದರಿಂದ ಮಕ್ಕಳ ಪಾಲ್ಗೊಳ್ಳುವಿಕೆ ಮತ್ತು ಉತ್ತಮ ಆಚರಣೆ ಸಾಧ್ಯವಾಗುತ್ತದೆ ಹಾಗೂ ಮಕ್ಕಳು ಹಾಡುವುದನ್ನು ವಿಡಿಯೋ ಮಾಡುವುದು. ಈ ಚಟುವಟಿಕೆಯು ಮಕ್ಕಳಲ್ಲಿ ವಿಶ್ವಾಸ ಮತ್ತು ದೇಶಭಕ್ತಿಯನ್ನು ಮೂಡಿಸುತ್ತದೆ.
➤ ಸ್ವಾತಂತ್ರ ಹೋರಾಟಗಾರರ ಪರಿಚಯ:- ಗ್ರಂಥಾಲಯ ಮೇಲ್ವಿಚಾರಕರು ಸ್ವತಂತ್ರ ಭಾರತ ಚಳುವಳಿಗೆ ಕೊಡುಗೆ ನೀಡಿದ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಥಳೀಯ ಹಿರಿಯರು, ಶಾಲಾ ಶಿಕ್ಷಕರು ಇವರುಗಳ ಮೂಲಕ ಪರಿಚಯಿಸಬೇಕು. ಅವರ ವ್ಯಕ್ತಿತ್ವವನ್ನು ವಿವರಿಸಿ, ಉತ್ತಮ ನಾಗರಿಕರಾಗಿ ದೇಶಕ್ಕೆ ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ಮಕ್ಕಳು ಅರಿಯುವಂತೆ ಪ್ರೇರೇಪಿಸಬೇಕು.
➤ ಆಗಸ್ಟ್ ತಿಂಗಳಲ್ಲಿ ಪೂರ್ಣವಾಗಿ ಸ್ವಾತಂತ್ರೋತ್ಸವ ಸಂಭ್ರಮವನ್ನು ಆಚರಿಸುವುದು. ಗ್ರಂಥಾಲಯ ಮೇಲ್ವಿಚಾರಕರು ದೇಶಭಕ್ತಿ, ಸಾಮಾಜಿಕ ಕಾಳಜಿಯುಳ್ಳ ದೇಶಭಕ್ತರ – ಚಲನಚಿತ್ರಗಳನ್ನು ಪ್ರದರ್ಶಿಸಲು ಕ್ರಮ ವಹಿಸುವುದು.
➤ ನಾನು ಮತ್ತು ನನ್ನ ದೇಶ :-ಗ್ರಂಥಾಲಯದಲ್ಲಿ ಮಕ್ಕಳು ಸ್ವಾತಂತ್ರ ಹೋರಾಟ ಮತ್ತು ಸ್ವತಂತ್ರ ಭಾರತವನ್ನು ಹೇಗೆ ಅರ್ಥಮಾಡಿಕೊಂಡಿದ್ದಾರೆಂದು ಚರ್ಚೆಗಳನ್ನು ನಡೆಸಬಹುದು. ಚರ್ಚೆಯು ಮಕ್ಕಳ ಕೇಂದ್ರೀಕೃತವಾಗಿ, ಮಕ್ಕಳಲ್ಲಿ ದೇಶಭಕ್ತಿ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಅಂಶಗಳ ವೃದ್ಧಿಗೆ ಪೂರಕವಾಗುವುದು.
ಈ ಮೇಲ್ಕಂಡಂತೆ 2023ರ ಭಾರತ “ಸ್ವಾತಂತ್ರ್ಯ ದಿನಾಚರಣೆ”ಯನ್ನು ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಆಗಸ್ಟ್ ಮಾಹೆಯಲ್ಲಿ ಪೂರ್ಣವಾಗಿ ಆಚರಿಸಲು ಕ್ರಮ ವಹಿಸುವುದು ಎಂದು ಆಯುಕ್ತರು, ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆದೇಶದಲ್ಲಿ ತಿಳಿಸಲಾಗಿದೆ.
ವರದಿ : ಚಂದ್ರು ಆರ್ ಭಾನಾಪೂರ್
(ವಿವಿಧ ಮೂಳಗಳಿಂದ ವಿಷಯ ಸಂಗ್ರಹ)