ಕೊಪ್ಪಳ : ತೊಗರಿ ಬೆಳೆಯ ಇಳುವರಿ ಹೆಚ್ಚಿಸುವಲ್ಲಿ ಜಿಲ್ಲೆಯ ರೈತರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೃಷಿ ಇಲಾಖೆಯಿಂದ ಸಲಹೆಗಳನ್ನು ನೀಡಲಾಗಿದೆ.
ಜಿಲ್ಲೆಯ ಪ್ರಸಕ್ತ ಸಾಲಿನಲ್ಲಿ ತೊಗರಿ ಬೆಳೆಯು ಸುಮಾರು 19,905 ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ತೊಗರಿ ಬೆಳೆಯಲ್ಲಿ ಹೆಚ್ಚಾಗಿ ಕಬ್ಬಿಣಾಂಶ, ಪ್ರೋಟೀನ್ ಅಂಶ, ನಾರಿನಂಶ ಮತ್ತು ಇತರೆ ಅವಶ್ಯಕ ಪೋಷಕಾಂಶಗಳು ಇರುತ್ತವೆ. ಈ ಎಲ್ಲಾ ಪೋಷಕಾಂಶಗಳು ಆರೋಗ್ಯಕ್ಕೆ ಉತ್ತಮವಾಗಿರುವ ಕಾರಣ ರೈತರು ತೊಗರಿ ಬೆಳೆಯ ಇಳುವರಿಯನ್ನು ಹೆಚ್ಚಿಸುವುದು ಅತಿ ಅವಶ್ಯಕವಾಗಿರುತ್ತದೆ. ರೈತರ ಜಮೀನಿನಲ್ಲಿ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಇಳುವರಿಯೂ ಪ್ರತಿ ಹೇಕ್ಟರ್‌ಗೆ ಕೇವಲ 4.55 ಕ್ವಿಂಟಲ್ ಇದ್ದು, ಈ ಇಳುವರಿಯನ್ನು 8ರಿಂದ 10ಕ್ವಿಂಟಲ್‌ಗೆ ಹೆಚ್ಚಿಸಲು ರೈತರು ಈ ಕೆಳಕಂಡ ಸುಧಾರಿತ ಬೇಸಾಯ ಕ್ರಮಗಳನ್ನು ಕೈಗೊಳ್ಳಬೇಕು.
*ಸುಧಾರಿತ ಬೇಸಾಯ ಕ್ರಮಗಳು*
ಬೇಸಿಗೆ ಸಮಯದಲ್ಲಿ ಮಾಗಿ ಉಳುಮೆ ಮಾಡಬೇಕು. ಸುಧಾರಿತ, ರೋಗನಿರೋಧಕ ಮತ್ತು ಗುಣಮಟ್ಟದ ಬಿತ್ತನೆ ಬೀಜಗಳನ್ನು ಬೆಳೆಯಬೇಕು. ಬಿತ್ತನೆ ಮಾಡುವಾಗ ಶೀಲಿಂದ್ರನಾಶಕ ಹಾಗೂ ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮಾ, ಪಿ.ಎಸ್.ಬಿ ಮತ್ತು ರೈಜೋಬಿಯಂಗಳಿಂದ ಬೀಜೋಪಚಾರ ಮಾಡಬೇಕು. ಸುಧಾರಿತ ಬೇಸಾಯ ಕ್ರಮಗಳ ಪ್ರಕಾರ ರಸಗೊಬ್ಬರಗಳನ್ನು ಬಳಸಿ. ಮಳೆ ಕೊರತೆಯಾದಗ ಎಡೆಕುಂಟೆ ಮೂಲಕ ತೇವಾಂಶ ಕಾಪಾಡುವುದು ಮತ್ತು ಸಂದಿಗ್ದ ಹಂತಗಳಲ್ಲಿ ನೀರು ಹಾಯಿಸಬೇಕು.
ಬೇವಿನ ಬೀಜದ ಕಷಾಯ ಸಿಂಪರಣೆ ಮಾಡಿ ಕೀಟ ಹತೋಟಿಯನ್ನು ಮಾಡಿಕೊಳ್ಳಿ. ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೋಗ ಅಥವಾ ಕೀಟದ ಹತೋಟಿ ಕ್ರಮಕ್ಕಾಗಿ ಸೂಕ್ತ ಔಷಧಿಗಳನ್ನು ಪಡೆಯಿರಿ. ತೊಗರಿ ಬೆಳೆಯ ಬೆಳವಣೆಗೆ ಹಂತದಲ್ಲಿ (ಬೆಳೆ ಹಂತ 55 ರಿಂದ 65 ದಿನಗಳು) ತಪ್ಪದೇ ಕುಡಿ ಚಿವುಟಬೇಕು. ಈ ರೀತಿ ಮಾಡುವುದರಿಂದ ತೊಗರಿ ಬೆಳೆಯಲ್ಲಿ ಕಾಳು ಕಟ್ಟುವುದು ಹೆಚ್ಚಾಗಿ ಇಳುವರಿಯಲ್ಲಿ ಸರಾಸರಿ ಶೇ.15 ರಿಂದ 30ರಷ್ಟು ಹೆಚ್ಚಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ರಚಲಿತ ಇರುವ ಪಲ್ಸ್ ಮ್ಯಾಜಿಕ್ ಎಂಬ ಲಘು ಪೋಷಕಾಂಶ ಮಿಶ್ರಣವನ್ನು ತೊಗರಿ ಬೆಳೆಯಲ್ಲಿ ಉಪಯೋಗಿಸುವುದರಿಂದ ಬೆಳೆ ಬೆಳವಣೆಗೆಯನ್ನು ಹೆಚ್ಚಿಸಿ ಹೂವು ಮತ್ತು ಕಾಯಿ ಉದುರುವಿಕೆಯನ್ನು ತಡೆಗಟ್ಟಿ ಇಳುವರಿಯಲ್ಲಿ ಶೇ.17 ರಿಂದ 20ರಷು ಹೆಚ್ಚು ಪಡೆಯಬಹುದು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.