“ಮುಟ್ಟು ನಿಂತಿತೇ”
ಹಸಿರು ಚಪ್ಪರದಡಿ
ಹಸೆಮಣೆಯನೇರಿ
ಅವನ ವರಿಸಿಕೊಂಡೊಡನೆ
ಕೇಳುತಿಹರೆಲ್ಲ
ಮುಟ್ಟು ನಿಂತಿತೇ?
ನನಗಿನ್ನೂ ಇಪ್ಪತ್ತು
ಹೊಸ ಊರಿನ ಹೊಸ ಬದುಕಿಗೆ
ಹೊಂದಿಕೊಳ್ಳುವಷ್ಟು ಸಮಯವಿನ್ನು ಬೇಕಿತ್ತು
ಗುಡಿಸಿ, ಒರೆಸಿ
ಅಂಗಳವ ಅಲಂಕರಿಸಿ
ಉಂಡುದನು ತೊಳೆದು
ಉಟ್ಟುದನು ಒಗೆದು
ದಣಿದು ಮಲಗಿರಲು
ಅವ ಮುಟ್ಟಿದೊಡನೆ
ಮುದುಡಿ ಮೌನವಾಗುತ್ತಿದ್ದೆ…
ಮೊದಲು ಮುಟ್ಟಾದೊಡನೆ
ಅಮ್ಮ ಸಂಭ್ರಮಿಸಿದ್ದಳು
ಕೊಬ್ಬರಿ, ಬೆಲ್ಲ,ಉತ್ತತ್ತಿಯ
ತುಪ್ಪದೊಳು ನೆನೆಸಿ ಕೊಟ್ಟು
ನೆತ್ತಿಗೆ ಎಣ್ಣೆಯ ಸವರಿ
ನೀರೆರೆಯುತ್ತಿದ್ದಳು..
ಇಂದೂ ಮುಟ್ಟಾಗಿದೆ ನನಗೆ
ಅಡುಗೆ ಮನೆಗೆ ಪ್ರವೇಶವಿಲ್ಲ
ದನಕೆ ಮೇವನಿಕ್ಕುವಂತಿಲ್ಲ
ಬಚ್ಚಲಲಿ ಮೀಯುವಂತಿಲ್ಲ
ನಾ ಉಣ್ಣುವ ಬಟ್ಟಲೊಂದಿಗೆ
ಮನೆಯ ಮೂಲೆಯೇ ನನಗೆಲ್ಲ
ಸಮಯ ಸರಿದಿದೆ
ವರುಷಗಳು ಕಳೆದಿವೆ,
ಜೊತೆ ಜೊತೆಗೆ
ಮುಟ್ಟು ನಿಂತಿತೇ
ಪ್ರಶ್ನೆಯು ನನ್ನ ಜೊತೆಗೆ ಸಾಗುತಿದೆ…
ಈಗೀಗ ನಾಮಕರಣ, ತೊಟ್ಟಿಲು ಶಾಸ್ತ್ರ, ಉಡಿ ತುಂಬುವ ಶಾಸ್ತ್ರಕ್ಕೂ ನನಗೆ ಆಮಂತ್ರಣವಿಲ್ಲ
ಎಷ್ಟು ಹೆತ್ತಿರುವೆ?
ಏಕೆ ಹೆರಲಿಲ್ಲ?
ಪ್ರಶ್ನೆಗಳಿಗೂ ಕೊರತೆಯಿಲ್ಲ…
ಆ ಮರಕೆ ತೊಟ್ಟಿಲ ಕಟ್ಟಿ
ಈ ಮರಕೆ ದಾರವ ಕಟ್ಟಿ
ಅಲ್ಲಿ ಮಿಂದು ಇಲ್ಲಿ ಉರುಳಿ
ದಣಿದಿರುವೆ
ಈಗಲೂ ಕೇಳುವಿರೇ
ಮುಟ್ಟು ನಿಂತಿತೇ…..
ಲೇಖಕರು:-

ಯುವ ಸಾಹಿತಿ ಹಾಗೂ ಸಂಶೋಧನಾ ವಿದ್ಯಾರ್ಥಿ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು