ಬೆಂಗಳೂರು : ಬಂಜಾರ ಸಮುದಾಯದ ಮುಖಂಡರನ್ನೊಳಗೊಂಡ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ನಿಯೋಗವು ವಿವಿಧ ಬೇಡಿಕೆ ಇಡೇರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇಂದು ಭೇಟಿ ಮಾಡಲಾಯಿತು.
ಇಂದು ಬೆಂಗಳೂರಿನಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ನೇತೃತ್ವದ ನಿಯೋಗಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ಉತ್ತಮ ಸ್ಪಂದನೆ ದೊರೆಯಿತು ಹಾಗೂ ತಕ್ಷಣವೇ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದು ನಿಯೋಗವು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದೆ.
ಬಂಜಾರ ಸಮುದಾಯದ ಬೇಡಿಕೆಗಳು ಹೀಗಿವೆ.
1. ಆಕ್ಟೊಬರ್ 15 ಮತ್ತು 16 ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ‘ರಾಜ್ಯ ಬಂಜಾರರ ಪ್ರತಿನಿಧಿಗಳ ಸಮ್ಮೇಳನ’ ವನ್ನು ಉದ್ಘಾಟಿಸಲು ತಾವುಗಳು ಆಗಮಿಸಬೇಕು.
2. ಕಳೆದ ಬಿಜೆಪಿ ಸರ್ಕಾರ ತಮ್ಮ ಅಸಂವಿಧಾನಿಕ ನಡೆಗಳ ಮೂಲಕ ಮೀಸಲಾತಿಯನ್ನು ದುರ್ಬಲಗೊಳಿಸಲು ಯತ್ನಿಸಿದ ಸಮಯದಲ್ಲಿ ಅವರ ಆ ನೀತಿಗಳನ್ನು ವಿರೋಧಿಸಿ ರಾಜ್ಯವ್ಯಾಪಿ ಬಂಜಾರ ಸಂಘಟನೆಗಳು ಪ್ರತಿಭಟಿಸಿದ ಸಮಯದಲ್ಲಿ ಬಂಜಾರ ಸಮುದಾಯದ ಕಾರ್ಯಕರ್ತರ ಮೇಲೆ ರಾಜ್ಯವ್ಯಾಪಿ ವಿನಾಕಾರಣ ದಾಖಲಾದ ಪ್ರಕರಣಗಳನ್ನು ರಾಜ್ಯಸರ್ಕಾರ ಹಿಂಪಡೆಯಬೇಕು.
3. 2019 ರಲ್ಲಿ ಕಲಬುರಗಿಯ ವಿಮಾನನಿಲ್ದಾಣವನ್ನು ಸ್ಥಾಪಿಸುವ ಸಮಯದಲ್ಲಿ ಬಂಜಾರರ ಕುಲಗುರು ಶ್ರೀ ಸೇವಾಲಾರ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿತ್ತು. ಅದೇ ಪ್ರದೇಶದಲ್ಲಿ ಸೇವಾಲಾಲರ ದೇವಸ್ಥಾನ, ಗ್ರಂಥಾಲಯ, ಮ್ಯೂಸಿಯಂ ನಿರ್ಮಿಸಬೇಕು.
4. ಸಾವಿರಾರು ವರ್ಷಗಳ ಇತಿಹಾಸವಿರುವ ಬಂಜಾರ ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಚೇದದಲ್ಲಿ ಸೇರಿಸಬೇಕು. ಇದರ ಕುರಿತಂತೆ ಅಧ್ಯಯನ ಮತ್ತು ಪ್ರಸ್ತಾವನೆಯನ್ನು ತಯಾರಿಸಲು ಅನುವಾಗುವಂತೆ ಭಾಷಾ ತಜ್ಞರ ಸಮಿತಿಯನ್ನು ರಚಿಸಬೇಕು.
5. ಕರ್ನಾಟಕ ತಾಂಡ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು. ಆ ಮೂಲಕ ಬಂಜಾರ ಸಮುದಾಯದ ಅಭಿವೃದ್ಧಿ ಕಾರ್ಯಯೋಜನೆಗಳನ್ನು ರೂಪಿಸಬೇಕು.
6. ಬಂಜಾರ ಸಮುದಾಯಕ್ಕೆ ಒಂದು ಮೆಡಿಕಲ್ ಕಾಲೇಜು/ವೃತ್ತಿಪರ ಕಾಲೇಜು ಮಂಜೂರು ಮಾಡಬೇಕು.
ಅದು ಅಲ್ಲದೇ ಬಂಜಾರ ಸಮುದಾಯದ ಜನರು ಕೂಲಿ ಅರಸಿ ದೂರದ ಸ್ಥಳಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಅಲ್ಲಿಯವರೆಗೆ ವಲಸೆ ಹೋಗುವವರ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆಯಬೇಕು. ಈ ಮೇಲ್ಕಂಡ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಸಿಎಂ ಅವರಲ್ಲಿ ಮನವಿ ಸಲ್ಲಿಸಿದರು.
ಈ ನಿಯೋಗದಲ್ಲಿ ಬಂಜಾರ ಸಮುದಾಯದ ಪ್ರಮುಖರಾದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ವಕೀಲರಾದ ಅನಂತ ನಾಯ್ಕ್, ಹಿರಿಯ ಹೋರಾಟಗಾರರು ಸುಭಾಷ್ ರಾಥೋಡ್, ಡಾ.ರಾಜಾ ನಾಯ್ಕ್, ವಿಜಯ್ ಜಾಧವ್, ರಮೇಶ್ ಚವಾಣ್, ಗೋವಿಂದಸ್ವಾಮಿ, ಅನಿಲ್ ಕುಮಾರ್, ದಿಲೀಪ್ ರಾಥೋಡ್, ಪರಶುರಾಮ ರಾಥೋಡ್ ರವರನ್ನು ಸೇರಿ ಹಲವರಿದ್ದರು.
ವರದಿ : ಚಂದ್ರು ಆರ್ ಭಾನಾಪೂರ್