ಕೊಪ್ಪಳ : ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವ ಉತ್ಸವ-2023-24 ಕಾರ್ಯಕ್ರಮವು ಸೆಪ್ಟಂಬರ್ 01ರಂದು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹಾಗೂ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ‘ವಿದ್ಯಾರ್ಥಿಗಳು ಜೀವನದಲ್ಲಿ ನಿರ್ಧಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಬೇಕು. ಗೆದ್ದೇ ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗಬೇಕು. ನಾವು ಓದುಲು ಬಂದಿದ್ದೇನೆ ಓದಬೇಕು ಎನ್ನುವ ಪ್ರಜ್ಞೆಯೊಂದಿಗೆ ನಿರಂತರ ಅಧ್ಯಯನ ನಡೆಸಿದಲ್ಲಿ ಯಶಸ್ಸಿನ ದಾರಿ ಸುಗಮವಾಗಲಿದೆ’ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ ಅವರು ಮಾತನಾಡಿ, ‘ಇಂದಿನ ಮಕ್ಕಳೇ ನಾಳೆಯ ಭವ್ಯ ಪ್ರಜೆಗಳು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳೇ ನಾಡಿನ ಸಂಪತ್ತಾಗಿದ್ದಾರೆ. `ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಸಂದೇಶ ಸಾರಿದ ಸ್ವಾಮಿ ವಿವೇಕಾನಂದರ ಯುವ ಶಕ್ತಿ ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ. ಇಂತಹ ಯುವ ಉತ್ಸವ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು. ಇಂದಿನ ಯುವ ಜನತೆ ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಯುವ ಕೇಂದ್ರ ಯುವ ಅಧಿಕಾರಿ ಮಾಂಟು ಪಾತರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ತಿಮ್ಮಾರೆಡ್ಡಿ ಮೇಟಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಡಾ.ಭಾಗ್ಯಜೋತಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಂಜುನಾಥ ಗೊಂಡಬಾಳ, ನೆಹರು ಯುವ ಕೇಂದ್ರದ ಲೆಕ್ಕ ಹಾಗೂ ಕಾರ್ಯಕ್ರಮಾಧಿಕಾರಿ ರಾಮರಾವ್ ಬಿರಾದಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಗಮನ ಸೆಳೆದ ವಿವಿಧ ಮಳಿಗೆಗಳು: ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಮತ್ತು ಜೀವನೋವ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತೋಟಗಾರಿಕೆ ಇಲಾಖೆ ಹಾಗೂ ಇತರ ಇಲಾಖೆಗಳಿಂದ ಹಾಕಿದ್ದ ನಾನಾ ಯೋಜನೆಗಳ ಕುರಿತಾದ ಮಾಹಿತಿಯುಳ್ಳು ಪ್ರಚಾರ ಮಳಿಗೆಗಳು ಗಮನ ಸೆಳೆದವು. ಕಾಲೇಜು ವಿದ್ಯಾರ್ಥಿಗಳು, ಯುವ ಜನರು ಹಾಗೂ ಸಾರ್ವಜನಿಕರು ಮಳಿಗೆಗಳಿಗೆ ಭೇಟಿ ನೀಡಿ, ಸರ್ಕಾರದ ಕಾರ್ಯಕ್ರಮ, ಸೌಲಭ್ಯಗಳು ಹಾಗೂ ಯೋಜನೆಗಳ ಮಾಹಿತಿ ಪಡೆದರು.