ಕುಕನೂರು : ಶಿಕ್ಷಕ ವೃತ್ತಿ ಎಂದರೆ ಮಕ್ಕಳಿಗೆ ಅಕ್ಷರಜ್ಞಾನ ನೀಡುವ ಒಂದು ಮಹಾನ್ ಸೇವೆ. ಅದು ಒಂದು ದೇವರ ಕೆಲಸ ಅಂತಾನೆ ಅನೇಕ ಮಂದಿ ಹೇಳುತ್ತಾರೆ. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ತಂದೆ-ತಾಯಿ ಬಿಟ್ಟರೆ ಶಿಕ್ಷಕರ ಪಾತ್ರ ಮಹತ್ವದಾಗಿದೆ.
ಶಿಕ್ಷಕ ವೃತ್ತಿ ಎಂಬುವುದು ನಿಸ್ವಾರ್ಥ ಸೇವೆ, ಪ್ರಾಮಾಣಿಕತೆಯ ಕೆಲಸ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚನಪನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಗಿರಿಜಾ ಧರ್ಮಸಾಗರ ಅವರು ಎಂದು ಹೇಳಬಹುದು. ಯಲಬುರ್ಗಾ ತಾಲೂಕಿನ ಕಲಭಾವಿ ಸರ್ಕಾರಿ ಶಾಲೆಯಸಹ ಶಿಕ್ಷಕ ಮರದಾನ ನದಾಫ್ ಅವರ ಪತ್ನಿಯ ವೈದ್ಯಕೀಯ ಚಿಕಿತ್ಸೆಗಾಗಿ ತಮಗೆ ಬಂದು ನಗದು ಬಹುಮಾನದ ಹಣವನ್ನು ನೀಡಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗಿರಿಜಾ ಧರ್ಮಸಾಗರ ಅವರಿಗೆ ತಮ್ಮ ವೃತ್ತಿ ಜೀವನದ ಕಾರ್ಯವನ್ನು ಗುರುತಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕೊಡಮಾಡುವ ಈ ವರ್ಷದ (2023-24) ಪ್ರತಿಷ್ಠಿತ ಪ್ರಶಸ್ತಿಯಾದ ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃರಕ್ಕೆ ಭಾಜನರಾಗಿದ್ದಾರೆ.