ಸೂಜಿಯ ಮೊನೆಯಷ್ಟು ಜಾಗಬಿಟ್ಟುಕೊಡಲ್ಲ :
ತಿಪ್ಪೇರುದ್ರಸ್ವಾಮಿ
ಕುಕನೂರು : ಅಕ್ರಮ ಅನ್ಯ ಮಾರ್ಗದ ಮೂಲಕ ಈ ಹಿಂದೆ ನವೋದಯ ಶಾಲೆ, ಐ ಟಿ ಐ ಕಾಲೇಜು, ಕೆ ಎಲ್ ಈ ಕಾಲೇಜ್ ಗೆ ಗುದ್ನೇಶ್ವರ ಮಠದ ಸುಮಾರು 60 ಎಕರೆ ಜಮೀನು ಕಬಳಿಸಲಾಗಿದೆ. ಎಲ್ಲ ದಾಖಲೆಗಳನ್ನು ಕ್ರೂಡಿಕರಿಸುತ್ತಿದ್ದು ಜಮೀನುಗಳ ಅಕ್ರಮ ಪರಬಾರೆ ಆಗಿರುವ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಿದೆ, ಇನ್ನು ಮುಂದೆ ಮಠದ ಅಷ್ಟಿಯಲ್ಲಿ ಸೂಜಿಯ ಒಂದು ಮೊನೆಯಾಷ್ಟು ಜಾಗವನ್ನು ಕೊಡುವುದಿಲ್ಲ ಎಂದು ಹಿರಿಯ ವಕೀಲ, ಕಾಡಾ ಮಾಜಿ ಅಧ್ಯಕ್ಷ ಡಾ ತಿಪ್ಪೇರುದ್ರಸ್ವಾಮಿ ಎಚ್ಚರಿಕೆ ನೀಡಿದರು.
ಪಟ್ಟಣದ ಗುದ್ನೇಶ್ವರ ಮಠದಲ್ಲಿ ಗುದ್ನೇಶ್ವರ ದೇವಸ್ಥಾನ ಜಮೀನು ಉಳಿಕೆಗಾಗಿ ಗ್ರಾಮಸ್ಥರು ಕೈಕೊಂಡ ಧರಣಿಯಲ್ಲಿ ಪಾಲ್ಗೊಂಡು ಬೆಂಬಲಿಸಿ ಅವರು ಮಾತನಾಡಿದರು.
ಜಮೀನು ದೇವಸ್ಥಾನಕ್ಕೆ ಸೇರಿದೆ, ಇದು ಸರ್ಕಾರದ ಹಕ್ಕು ಬಾದ್ಯತಾ ಜಾಗವಲ್ಲ, ಮುಜರಾಯಿ ಇಲಾಖೆಗೆ ಒಳಪಟ್ಟ ಯಾವ ದಾಖಲೆ ಇಲ್ಲ, ದೇವಸ್ಥಾನಕ್ಕೆ ಸೇರಿದ 188 ಎಕರೆ ಜಮೀನು ಆಗಿನ ಕುಂತಳ ನಗರದ ರಾಜ ನೀಡಿದ ಜಮೀನು. ಹೀಗಾಗಿ ಇನ್ನು ಮುಂದೆ ಯಾವುದೇ ಜಾಗವನ್ನು ಸರ್ಕಾರಿ ಕಟ್ಟಡಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು.
ನೀಲಗುಂದ ಮಠದ ಪ್ರಭುಲಿಂಗ ಸ್ವಾಮೀಜಿಗಳು ಮಾತನಾಡಿ, ಇದೊಂದು ಎಂಟು ನೂರು ವರ್ಷಗಳ ಇತಿಹಾಸ ಇರುವ ದೇವಸ್ಥಾನ, ಶಕ್ತಿಪೀಠವಾಗಿದೆ, ದೇವಸ್ಥಾನದ ಜಾಗ ಕಬಳಿಸಲು ಯಾವ ಶಕ್ತಿಗಳು ಕೈ ಹಾಕಿದರೆ ಅವನತಿ ಹೊಂಡುತ್ತಾರೆ ಎಂದು ಹೇಳಿದರು. ದೇವಸ್ಥಾನ, ಇಲ್ಲಿಯ ಜಾಗವನ್ನು ಉಳಿಸಿಕೊಳ್ಳಲು ಈಗ ನಿಮ್ಮಲ್ಲಿ ಒಗ್ಗಟ್ಟು, ಹೋರಾಟದ ಕಿಚ್ಚು ಹೊತ್ತಿಕೊಂಡಿದೆ ಇದು ಎಂದೂ ಆರದಿರಲಿ ಎಂದು ಹೇಳಿದರು.
ಸಭೆಯಲ್ಲಿ ಯಲಬುರ್ಗಾ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿಗಳು, ಮುರಡಿ ಮಠದ ಬಸವಲಿಂಗೇಶ್ವರ ಸ್ವಾಮೀಜಿ, ಕುಕನೂರು ಅನ್ನದಾನಿಶ್ವರ ಸ್ವಾಮೀಜಿ, ಕೊಪ್ಪಳ ಮೈನಳ್ಳಿ ಸ್ವಾಮೀಜಿ,, ಬಳ್ಳಾರಿಯ ಕಲ್ಯಾಣ ಶ್ರೀಗಳು, ಮಂಗಳೂರು ಅರಳೆಲೆ ಮಠದ ಶ್ರೀಗಳು, ಸೇರಿದಂತೆ ನಾಡಿನ 11 ಮಠದ ಶ್ರೀಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಕುಕನೂರು ಪಟ್ಟಣ ಪಂಚಾಯತ ಬಿಜೆಪಿ ಸದಸ್ಯರಾದ ಬಾಲರಾಜ್ ಗಾಳಿ, ಮಹಾಂತೇಶ್ ಹೂಗಾರ್, ಸಿದ್ದಯ್ಯ ಉಳ್ಳಾಗಡ್ಡಿ ಪಾಲ್ಗೊಂಡು ಬೆಂಬಲಿಸಿದರು. ಬಿಜೆಪಿ ಮುಖಂಡ ಶಿವಕುಮಾರ್ ನಾಗಲಾಪುರ,ಬಿಜೆಪಿ ಪ.ಪಂ.ಸದಸ್ಯ ಜಗನ್ನಾಥ ಬೋವಿ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರುದ್ರಯ್ಯ ವಿರುಪಣ್ಣನವರ್, ಗ್ರಾಮಸ್ಥರು, ಭಕ್ತರು ಭಾಗವಹಿಸಿದ್ದರು.