ತಹಸೀಲ್ದಾರ್ ಕಚೇರಿ ಕಟ್ಟಡಕ್ಕೆ ಸ್ಥಳೀಯರ ವಿರೋಧ ಹಿನ್ನೆಲೆ.
ಜಿ ಜಿ ಗ್ರಾನೈಟ್ ಸ್ವಾಧೀನಕ್ಕೆ ಸಾರ್ವಜನಿಕರ ಮನವಿ.
ಕುಕನೂರು : ಗುದ್ನೇಶ್ವರ ಮಠದ ಜಾಗದಲ್ಲಿ ತಾಲೂಕಿನ ನೂತನ ಆಡಳಿತ ಕಚೇರಿ ನಿರ್ಮಾಣಕ್ಕೆ ಸ್ಥಳೀಯರು ವಿರೋದಿಸುತ್ತಿರುವ ಹಿನ್ನೆಲೆ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಜಿ ಜಿ ಗ್ರಾನೈಟ್ ಮತ್ತು ಸುತ್ತಮುತ್ತಲ ರೈತರನ್ನು ಮನವೊಲಿಸಿ ಅಲ್ಲಿ ಆಡಳಿತ ಕಚೇರಿ ಕಟ್ಟಡ ಕಟ್ಟಲು ಮುಂದಾಗಬೇಕು ಎಂದು ಸಾರ್ವಜನಿಕರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತಂತೆ ಇಂದು ಕುಕನೂರು ಪಟ್ಟಣ ಪಂಚಾಯತ್ ಕಾಂಗ್ರೆಸ್ ಸದಸ್ಯರು, ನಾಗರಿಕ ವೇದಿಕೆ, ಹಮಾಲರ ಸಂಘ, ದಲಿತ ಸಂಘರ್ಷ ಸಮಿತಿ ಮತ್ತು ಸಾರ್ವಜನಿಕರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಅಧಿಕಾರಿಗಳು ಆದಷ್ಟು ಬೇಗ ಕುಕನೂರು ತಾಲೂಕು ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕೇಳಿಕೊಂಡಿದ್ದಾರೆ.
ವಕೀಲರ ಸಂಘದ ಬಸವರಾಜ್ ಜಂಗ್ಲಿ ಮಾತನಾಡಿ, ಶಾಸಕರ ಅಭಿವೃದ್ಧಿ ಕೆಲಸಕ್ಕೆ ರಾಜಕೀಯ ಪ್ರೇರಿತ ಪ್ರತಿಭಟನೆ, ವಿರೋಧ ವ್ಯಕ್ತಪಡಿಸುವುದು ನಡೆಯುತ್ತಿದೆ, ಇದು ನಿಜಕ್ಕೂ ಸಾರ್ವಜನಿಕರ ಅನುಕೂಲಕ್ಕಾಗಿ ಮಾಡುವ ಕೆಲಸವಾಗಿದೆ, ಹೀಗಾಗಿ ಎಲ್ಲರೂ ಸಹಕರಿಸಬೇಕು ಎಂದರು.
ತಾಲೂಕು ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ ಮಾತನಾಡಿ, ಈ ಹಿಂದೆ ಮಾಜಿ ಸಚಿವ ಹಾಲಪ್ಪ ಆಚಾರ್ ಅವಧಿಯಲ್ಲಿ ಹಮಾಲರ ಕಾಲೋನಿಯ ಜಾಗದಲ್ಲಿ ಪದವಿ ಪೂರ್ವ ಕಾಲೇಜು ನಿರ್ಮಾಣ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವಕ್ತಾರ ಸಂಗಮೇಶ ಗುತ್ತಿ, ಪಟ್ಟಣ ಪಂಚಾಯತ್ ಕಾಂಗ್ರೆಸ್ ಸದಸ್ಯರಾದ ನೂರ್ ಅಹ್ಮದ್ ಗುಡಿಹಿಂದಲ್, ಗಗನ್ ನೋಟಗಾರ್ ಸೇರಿದಂತೆ, ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ, ದಲಿತ ಸಂಘರ್ಷ ಸಮಿತಿ ಸದಸ್ಯರು, ನಾಗರೀಕ ವೇದಿಕೆಯ ಮಂಜುನಾಥ್ ಸೋಂಪುರ್, ಮುತ್ತು ವಾಲ್ಮೀಕಿ, ಹೊನ್ನಪ್ಪ ಮುರಡಿ, ವಕೀಲರ ಸಂಘದ ರಮೇಶ್ ಗಜಕೋಶ, ಇತರ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.