Breaking news :ಕುಕನೂರಿನ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ನಿಧನ

You are currently viewing Breaking news :ಕುಕನೂರಿನ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ನಿಧನ

 77 ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಗೈದ ಕಲಾವಿದ.

ಕುಕನೂರಿನ ಹಿರಿಯ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ(84) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಬಾಬಣ್ಣ ಕಲ್ಮನಿ ಅವರಿಗೆ ೨೦೨೧-೨೨ನೇ ಸಾಲಿನ ಗುಬ್ಬೀ ವೀರಣ್ಣ ಪ್ರಶಸ್ತಿ ಒಲಿದು ಬಂದಿತ್ತು. ಆದರೆ ಇನ್ನೂ ಪ್ರಧಾನ ಆಗಿಲ್ಲ.
ರಂಗಭೂಮಿಯಲ್ಲಿ ೭೭ ವರ್ಷ ಸೇವೆ ಸಲ್ಲಿಸಿದ ಹಿರಿಮೆ ಅವರದು., ೧೯೪೬ಕ್ಕೂ ಮುಂಚಿತವಾಗಿ ರಂಗಭೂಮಿಯಲ್ಲಿ ನಟನೆ, ತಮ್ಮ ೧೦ನೇ ವರ್ಷದಲ್ಲಿ ರಂಗಭೂಮಿ ಪ್ರವೇಶ ಮಾಡಿದ್ದರು. ಬಾಬಣ್ಣ ೨/೧೧/೧೯೩೪ ರಲ್ಲಿ ಜನಿಸಿದ್ದರು.
೧೦ನೇ ವರ್ಷದಲ್ಲಿ ಬಣ್ಣ ಹಚ್ಚಿದ ಬಾಬಣ್ಣ ಇಳಿವಯಸ್ಸಿನಲ್ಲಿ ಖಡಕ್ ಆಗಿ ರಂಗಭೂಮಿಯಲ್ಲಿ ನಟಿಸುತ್ತಿದ್ದರು. ಬಾಬಣ್ಣ ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು. ಇವರ ಇಡೀ ಕುಟುಂಬವೇ ರಂಗಭೂಮಿಗೆ ಮೀಸಲು. ಬಾಬಣ್ಣ ಅವರ ತಾಯಿ ಹೆಸರಾಂತ ರಂಗಭೂಮಿ ಕಲಾವಿದೆ ರೆಹೆಮಾನವ್ವ ಕಲ್ಮನಿ. ವೃತ್ತಿ ರಂಗಭೂಮಿಯ ದಿಗ್ಗಜೆ ಎಂದೇ ರೆಹೆಮಾನವ್ವ ಹೆಸರುವಾಸಿ. ಸುಮಾರು ೭೭ ವರ್ಷಕ್ಕೂ ಹೆಚ್ಚು ಕಾಲದಿಂದ ರಂಗಭೂಮಿ ಸೇವೆಗೈದಿಧ್ಧಾರೆ.
ರಾಜ್ಯ ಪ್ರಶಸ್ತಿ ಪುರಸ್ಕೃತೆ ರಂಗಕಲಾವಿದೆ ದಿ. ರೆಹಿಮಾನವ್ವ ಒಬ್ಬ ಧೀಮಂತ ನಟಿ. ರೆಹಿಮಾನವ್ವ ಅವರ ಐವರು ಮಕ್ಕಳಲ್ಲಿ ದೊಡ್ಡವರೇ ಈ ಬಾಬಣ್ಣ (ಜಲಾಲುದ್ದೀನ್). ಬಾಬಣ್ಣನವರೂ ದೊಡ್ಡವಾಡ, ಅರಿಷಿಣಗೋಡಿ, ಚಿಂದೋಡಿ, ಗುಡಿಗೇರಿ, ಶೇಖಮಾಸ್ತರ, ಪುಟ್ಟರಾಜ ಗವಾಯಿಗಳ ಕಂಪನಿ ಸೇರಿದಂತೆ ಕರ್ನಾಟಕದ ಹಲವು ಹತ್ತು ನಾಟಕ ಕಂಪನಿಗಳಲ್ಲಿ ಅಭಿನಯಿಸಿದವರು. ತಾಯಿ ಕಟ್ಟಿದ ಮಹಾಮಾಯಾ ನಾಟ್ಯ ಸಂಘದ ಜವಬ್ದಾರಿ ಹೊತ್ತು ಅದನ್ನು ವಿಜಯಲಕ್ಷಿö್ಮ ನಾಟ್ಯ ಸಂಘ ಎಂದು ಹೆಸರು ಬದಲಿಸಿ ನಾಡಿನಾದ್ಯಂತ ರಂಗಪ್ರದರ್ಶನ ನೀಡಿದ ಹಿರಿಮೆ ಅವರದು.
ಕಂಪನಿ ನಿಂತ ಮೇಲೆ ಮತ್ತೆ ಬೇರೆ ಬೇರೆ ಕಂಪನಿಗಳಲ್ಲಿ ಪುರುಷ, ಸ್ತ್ರೀ ಪಾತ್ರ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ನಟಿಸಿ ಪ್ರಖ್ಯಾತ ನಟರೆನಿಸಿಕೊಂಡರು. ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ನಾಗಮ್ಮ, ಮಹಾದೇವಿ, ಪದ್ಮವ್ವ, ಚಿತ್ತರಂಜನಿ, ಮಲ್ಲಿಕಾರ್ಜುನ, ವೇಮನ ಸೇರಿದಂತೆ ಅಷ್ಟೂ ಪಾತ್ರಗಳಲ್ಲಿ ನಟಿಸಿ ದಾಖಲೆ ನಿರ್ಮಿಸಿದರು.
ಕಂಪನಿಗಳ ಭರಾಟೆ ಇಳಿಮುಖವಾದ ಮೇಲೆ ಕಳೆದ ಹತ್ತು ಹದಿನೈದು ವರ್ಷಗಳಿಂದ ವೃತ್ತಿರಂಗಭೂಮಿಯ ಮತ್ತೊಬ್ಬ ಪ್ರಖ್ಯಾತ ನಟ ಎಂ.ಎಸ್. ಕೊಟ್ರೇಶ ಅವರೊಂದಿಗೆ ತಂಡ ಮಾಡಿಕೊಂಡು ಆಹ್ವಾನ ಬಂದ ಕಡೆ ಹೋಗಿ ನಾಟಕ ಆಡಿದರು. ಈಗ ಇವರು ಪ್ರದರ್ಶಿಸುವ ನಾಟಕಗಳೆಂದರೆ ಶಿಶುನಾಳ ಶರೀಫ (ಇದರಲ್ಲಿ ಬಾಬಣ್ಣ ಶರೀಫ), ಸಿದ್ಧಾರೂಢ ಮಹಾತ್ಮೆ (ಇದರಲ್ಲಿ ಬಾಬಣ್ಣ ಶರೀಫ), ನವಲುಗುಂದದ ನಾಗಲಿಂಗಲೀಲೆ (ಇದರಲ್ಲಿ ಬಾಬಣ್ಣ ರಿಚರ್ಡ್ಸ್, ಶರೀಫ ಪಾತ್ರ,) ಮುಂತಾದ ಸಂತರ, ಅನುಭಾವಿಗಳ ನಾಟಕಗಳನ್ನಾಡಿದ್ದಾರೆ.
ಅನೇಕ ರಂಗಭೂಮಿ ಕಲಾವಿದರಿಗೆ ಮಾದರಿ ಆಗಿದ್ದಾರು. ಹಲವಾರು ಜನರು ಬಂದು ಬಾಬಣ್ಣ ಅವರ ಬಳಿ ರಂಗಭೂಮಿಯ ತಾಲೀಮು ಪಡೆಯುತ್ತಿದ್ದರು.

ವರದರಾಜ ಪ್ರಶಸ್ತಿ, ಬಳ್ಳಾರಿಯ ರಾಘವ ಕಲಾ ಬಳಗ ಕೊಡುವ ರಾಘವ ರಾಜ್ಯ ಪ್ರಶಸ್ತಿ ಹಾಗು ನಾಡಿನಾದ್ಯಂತ ಹಲವಾರು ಸಂಘ ಸಂಸ್ಥೆಗಳು, ಅನ್ಯರಾಜ್ಯ ಸಂಸ್ಥೆಗಳು ಸನ್ಮಾನಿಸಿ ಬಾಬಣ್ಣ ಅವರನ್ನು ಗೌರವಿಸಿವೆ.

Leave a Reply

error: Content is protected !!