ಕುಕನೂರು : ಕೊಪ್ಪಳ ಜಿಲ್ಲೆಯ ಎರಡನೇ ಅತೀ ದೊಡ್ಡ ಜಾತ್ರೆ ಎಂದು ಖ್ಯಾತಿ ಪಡೆದಿರುವ ಕುಕನೂರು ಗುದ್ನೇಶ್ವರ ಮಠದ ಶ್ರೀ ರುದ್ರಮುನೀಶ್ವರ ಸ್ವಾಮಿಯ ಪಂಚ ಕಳಶದ ಮಹಾ ರಥೋತ್ಸವ ಇಂದು ಡಿ 26 ಹೊಸ್ತಿಲು ಹುಣ್ಣಿಮೆ ದಿನ ವಿಜೃಂಭಣೆಯಿಂದ ಜರುಗಲಿದೆ.
ಇಂದು ನಡೆಯುವ ಅದ್ದೂರಿ ರಥೋತ್ಸವದಲ್ಲಿ ಬಿನ್ನಾಳ ಗ್ರಾಮದ ಬಸವೇಶ್ವರ ನಂದಿ ಕೋಲು, ಕಕ್ಕಿಹಳ್ಳಿಯ ಅಳಿಯ ಚನ್ನ ಬಸವೇಶ್ವರ ಸ್ವಾಮಿಯ ಪಲ್ಲಕ್ಕಿ ಪಾಲ್ಗೊಂಡು ಸಂಪ್ರದಾಯಿಕ, ಧಾರ್ಮಿಕ ಕಾರ್ಯಗಳೊಂದಿಗೆ ಅದ್ದೂರಿ ರಥೋತ್ಸವಕ್ಕೆ ಸಾಕ್ಷಿ ಆಗಲಿವೆ.
ಸುಮಾರು ಆರು ನೂರು ವರ್ಷಗಳ ಹಿಂದೆಯೇ ಇಲ್ಲಿಯ ಐದು ನೂರು ಎಕರೆ ಭವ್ಯ ಪ್ರದೇಶದಲ್ಲಿ ಭಕ್ತಿ ಭಾವದ ಎಂಬ ಹುಣುಸೆ ಬೀಜ ಬಿತ್ತಿದ ಶರಣರು, ಆ ಮರಗಳು ಇಂದಿಗೂ ಹೆಮ್ಮರವಾಗಿ ನೋಡಲು ಕಾಣುತ್ತಿವೆ. ಪವಾಡ ಪುರುಷ, ಮಹಾ ಮಹಿಮ ಶ್ರೀ ರುದ್ರಮುನೀಶ್ವರ ಸ್ವಾಮೀಯು ಇಲ್ಲಿ ನೆಲೆಸಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ.
ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿ, ಕೊಪ್ಪಳ ಜಿಲ್ಲೆಯ ಪ್ರಸಿದ್ದ ಜಂಗಮ ಕ್ಷೇತ್ರವಾಗಿ ಹೆಸರಾಗಿದೆ. ಇಲ್ಲಿ ವರ್ಷ ಪೂರ್ತಿ, ದಿನಂ ಪ್ರತೀ ಧಾರ್ಮಿಕ ಕಾರ್ಯ, ವಿಧಿ ವಿಧಾನಗಳು ಶ್ರೀ ರುದ್ರಮುನೀಶ್ವರ ಸ್ವಾಮಿಗೆ ಸಮರ್ಪಿಸಲ್ಪಡುತ್ತವೆ. ಇದೊಂದು ಶಕ್ತಿ ಪೀಠ, ಗುದ್ನೇಶ್ವರ ಸ್ವಾಮೀಯು ಇಲ್ಲಿ ಹಾವಾಗಿ ನೆಲೆಸಿ ಭಕ್ತಿಯಿಂದ ಬೇಡಿಕೊಂಡ ಭಕ್ತರ ಅಶೋತ್ತರಗಳನ್ನು ಈಡೇರಿಸುತ್ತಾನೆ.
ಪ್ರತೀ ವರ್ಷವೂ ಇಲ್ಲಿ ಹೊಸ್ತಿಲು ಹುಣ್ಣಿಮೆ ದಿನ ನೀಲಗುಂದ ಮಠದ ಶ್ರೀ ಪ್ರಭುಲಿಂಗ ದೇವರ ದಿವ್ಯ ಉಪಸ್ಥಿತಿಯಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ, ಪಂಚ ಕಳಶದ ರಥೋತ್ಸವ ಜರುಗುತ್ತದೆ. ನಾಡಿನ ಮೂಲೆ ಮೂಲೆ ಯಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಸುಮಾರು ಹದಿನೈದು ದಿನಗಳ ಕಾಲ ಜಾತ್ರೆ ನಡೆಯುತ್ತದೆ.