ವಿಷಯ ಸಂಗ್ರಹ ಹಾಗೂ ವರದಿ : ಚಂದ್ರು ಆರ್ ಭಾನಾಪೂರ್
ಬೆಂಗಳೂರು : ರಾಜ್ಯದ ಬಿಜೆಪಿ ನಾಯಕರಲ್ಲಿ ಈಗಲೂ ನಾನು ವಿನಂತಿ ಮಾಡುತ್ತಿದ್ದೇನೆ. ದೇವರು-ಧರ್ಮದ ಹೆಸರಲ್ಲಿ ಕ್ಷುಲಕ ರಾಜಕೀಯ ಮಾಡುವುದನ್ನು ಕೈಬಿಟ್ಟು ಜವಾಬ್ದಾರಿಯುತವಾದ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವ ಪ್ರಯತ್ನ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ನಾಯಕರಲ್ಲಿ ವಿನಂತಿ ಮಾಡಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಈ ರೀತಿ ಹೇಳಿದ್ದು, “ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಹೇಳುತ್ತಿರುವ ಬಿಜೆಪಿ ರೀತಿಯಲ್ಲಿ ನಾವು ರಾಜ್ಯವನ್ನು ಬಿಜೆಪಿ ಮುಕ್ತ ಮಾಡುತ್ತೇವೆ ಎಂಬ ಸೊಕ್ಕಿನ ಹೇಳಿಕೆಗಳನ್ನು ನೀಡುವುದಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿಯನ್ನು ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಬೇಕೆಂಬುದು ನನ್ನ ಗುರಿ. ರಾಜ್ಯ ಬಿಜೆಪಿ ನಾಯಕರ ಇತ್ತೀಚಿನ ಅವಾಂತರಗಳನ್ನೆಲ್ಲ ನೋಡಿದರೆ ಈ ಗುರಿ ಸಾಧನೆಗೆ ಅವರೇ ಸಹಕಾರ ನೀಡುತ್ತಿರುವಂತೆ ಕಾಣುತ್ತಿದೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, “ರಾಜ್ಯದಲ್ಲಿ ಕ್ರಿಮಿನಲ್ ಕೃತ್ಯಗಳು ಹೆಚ್ಚಾಗಲು ಅಪರಾಧ ಮತ್ತು ಅಪರಾಧಿಗಳಿಗೆ ಜಾತಿ-ಧರ್ಮದ ಬಣ್ಣಹಚ್ಚುವ ಬಿಜೆಪಿಯ ಕಾನೂನು ವಿರೋಧಿ ನಡವಳಿಕೆಗಳೇ ಕಾರಣ. ವ್ಯಕ್ತಿಯೊಬ್ಬ ಎಂತಹ ಘನಘೋರ ಅಪರಾಧಗಳನ್ನು ಬೇಕಾದರೂ ಎಸಗಲಿ, ಆತ ಕೇಸರಿ ಶಾಲನ್ನು ತಲೆಗೆ ಸುತ್ತಿಕೊಂಡು ನಾನೊಬ್ಬ ಹಿಂದೂ ಎಂದು ಕೂಗಿದರೆ, ಬಿಜೆಪಿ ನಾಯಕರು ಆತನ ರಕ್ಷಣೆಗೆ ಧಾವಿಸುತ್ತಾರೆ. ಈ ಮೂಲಕ ಕೇಸರಿ ಶಾಲು ಮಾತ್ರವಲ್ಲ ಹಿಂದೂ ಧರ್ಮಕ್ಕೂ ಬಿಜೆಪಿ ನಾಯಕರು ಅವಮಾನ ಮಾಡುತ್ತಿದ್ದಾರೆ. ಇದು ಧರ್ಮದ್ರೋಹದ ನಡೆ. ಕಾನೂನನ್ನು ಅದರ ಪಾಡಿಗೆ ಕೆಲಸ ಮಾಡಲು ಬಿಟ್ಟು ಬಿಡಿ ಎಂದು ಕಿವಿಮಾತು ಹೇಳಿದ್ದಾರೆ.