ವಿಶೇಷ ವರದಿ : ಈರಯ್ಯ ಕುರ್ತಕೋಟಿ
ಕುಕನೂರು : ಕೊಪ್ಪಳ ಜಿಲ್ಲೆಯ ಬಿಜೆಪಿ ನೂತನ ಅಧ್ಯಕ್ಷರಾಗಿ ನೇಮಕರಾದ ನವೀನ್ ಕುಮಾರ್ ಗುಳಗಣ್ಣನವರ್ ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ, ಇಂದು ನವೀನ್ ಕುಮಾರ್ ಅವರು ಸ್ಥಳೀಯ ಇಟಗಿ ಮಹೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಮೊದಲು ಭಾರತೀಯ ಜನತಾ ಪಕ್ಷವು ಜಿಲ್ಲೆಯ ಅಧ್ಯಕ್ಷನನ್ನಾಗಿ ನೇಮಕ ಮಾಡಿ ನನಗೆ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಜವಾಬ್ದಾರಿ ನೀಡಿದೆ. ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಜಿಲ್ಲೆಯಲ್ಲಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಜಿಲ್ಲೆಯಲ್ಲಿ ಮತ್ತೆ ಬಿಜೆಪಿ ಪಕ್ಷವನ್ನು ಮುಂಚೂಣಿಗೆ ತರುಲು ಶ್ರಮಿಸುತ್ತೇನೆ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ನವೀನ್ ಕುಮಾರ್ ಗುಳಗಣ್ಣನವರ್ ಹೇಳಿದ್ದಾರೆ.

ನೂತನ ಅಧ್ಯಕ್ಷರಾಗಿ ನೇಮಕವಾದ ಮೊದಲ ದಿನವೇ ಪಕ್ಷ ಸಂಘಟನೆಗೆ ಕಾರ್ಯಪ್ರವೃತ್ತರಾದ ನವೀನ್ ಕುಮಾರ್ ಅವರು ಸ್ಥಳೀಯ ಇಟಗಿ ಮಹೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರೊಂದಿಗೆ ಮಾತನಾಡಿದರು.
ನಾಲ್ಕು ವರ್ಷ ಪ್ರಧಾನ ಕಾರ್ಯದರ್ಶಿಯಾಗಿ, ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯನಾಗಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಪಕ್ಷವು ನನಗೆ ದೊಡ್ಡ ಜವಾಬ್ದಾರಿ ಅವಕಾಶ ನೀಡಿದ್ದು ಪಕ್ಷದ ಸೇವೆಗೆ ಹಗಲಿರುಳು ಶ್ರಮಿಸುತ್ತೇನೆ, ಪಕ್ಷ ಸಂಘಟನೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಪಕ್ಷದ ಸೇವೆಗೆ ಅವಕಾಶ ಮಾಡಿಕೊಟ್ಟ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯದ ನಾಯಕರಿಗೆ, ಜಿಲ್ಲೆಯ ಎಲ್ಲ ನಾಯಕರಿಗೆ ನವೀನ್ ಕುಮಾರ್ ಅವರು ಅಭಿನಂದನೆಗಳನ್ನು ತಿಳಿಸಿದರು.
ತಮ್ಮ ದಿವಂಗತ ಈಶಣ್ಣ ಗುಳಗಣ್ಣನವರ್ ಅವರನ್ನು ಸ್ಮರಿಸಿದ ನವೀನ್, ತಮ್ಮ ತಂದೆಯಂತೆ ಜಿಲ್ಲೆಯಲ್ಲಿ ಪಕ್ಷವನ್ನು ಮತ್ತೆ ಪುನರ್ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.
ತಾಲೂಕಿನ ಬಿಜೆಪಿ ಮುಖಂಡರೊಂದಿಗೆ ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಪೂಜ್ಯ ಬಸವಲಿಂಗೇಶ್ವರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಕುಷ್ಟಗಿಗೆ ತೆರಳಿ ನಿಕಟ ಪೂರ್ವ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಅವರನ್ನು ಭೇಟಿಯಾಗಿ ಪಕ್ಷ ಸಂಘಟನೆ ಬಗ್ಗೆ ಸಮಾಲೋಚಿಸಿದ್ದಾರೆ.
ನೂತನ ಜಿಲ್ಲಾಧ್ಯಕ್ಷರಿಗೆ ಯಲಬುರ್ಗಾ ಕುಷ್ಟಗಿ, ಗಂಗಾವತಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರು, ಹಿರಿಯರಿಂದ ಅಭಿನಂದನೆಗಳ ಮಹಾಪೂರವೆ ಹರಿದು ಬಂದಿದ್ದು ಈ ಮೂಲಕ ಬಿಜೆಪಿ ಪಕ್ಷದಲ್ಲಿ ಯುವ ನಾಯಕತ್ವದೊಂದಿಗೆ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದೆ.