ಬೆಂಗಳೂರು : 2023-24ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಆಕಾಂಕ್ಷಿತ ತಾಲೂಕುಗಳ ಸರ್ಕಾರಿ ಶಾಲಾ ಕೊಠಡಿಗಳ ದುರಸ್ಥಿ ಕಾಮಗಾರಿಗೆ ಅನುದಾವನ್ನು ಇದೀಗ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಈ ಬಗ್ಗೆ ಶಾಲಾ ಶಿಕ್ಷಣ ಆಯುಕ್ತೆ ಬಿ.ಬಿ ಕಾವೇರಿ ಆದೇಶ ಹೊರಡಿಸಿದೆ. 2023-24ನೇ ಸಾಲಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕೊಠಡಿಗಳ ದುರಸ್ಥಿ ಕಾಮಗಾರಿ ಕೈಗೊಳ್ಳಲು ಒಟ್ಟು 1,255 ಶಾಲೆಗಳ 4,242 ಕೊಠಡಿಗಳ ದುರಸ್ಥಿ ಕಾಮಗಾರಿಗಳಿಗೆ ರೂ.2,892.84 ಲಕ್ಷ ಅನುದಾನ ಮಂಜೂರು ಮಾಡಲಾಯಿತು ಎಂದು ಮಾಹಿತಿ ಬಂದಿದೆ.
ಈ ಅನುದಾನವನ್ನು ಕಟ್ಟಡ ಕಾಮಗಾರಿಗಳ ಮಾರ್ಗಸೂಚಿ ಅನ್ವಯ ನಿಯಮಾನುಸಾರ ಆಡಳಿತಾತ್ಮಕ ಅನುಮೋದನ್ನು ಪಡೆದು ಉಪಯೋಗಿಸುವುದು. ದುರಸ್ಥಿ ಪಡಿಸುವಾಗ ಕೊಠಡಿ ಸಂಖ್ಯೆಯಲ್ಲಿ ಬದಲಾವಣೆ ಅವಶ್ಯಕವಿದ್ದಲ್ಲಿ, ಸಂಬಂಧಿಸಿದ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಅನುಮೋದನೆ ಪಡೆದು ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಒದಗಿಸಲಾದ ಅನುದಾನ ಮಿತಿಯೊಳಗೆ ಹಾಗೂ ಸರ್ಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ಕೋರದಂತೆ 2023-24ನೇ ಆರ್ಥಿಕ ಸಾಲಿನ ಅಂತ್ಯದೊಳಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಈ ಕಾಮಗಾರಿಗಳ ಆರ್ಥಿಕ & ಭೌತಿಕ ಪ್ರಗತಿಗಳ ವಿವರಗಳನ್ನು ತ್ರೈಮಾಸಿಕವಾರು ಈ ಕಚೇರಿಗೆ ಸಲ್ಲಿಸಬೇಕು. ಸದರಿ ಕಾಮಗಾರಿಗಳನ್ನು ಕಾಲಮಿತಿ ಯೋಜನೆಯಾಗಿ ನಿರ್ವಹಿಸಬೇಕು. ದುರಸ್ಥಿ, ನಿರ್ಮಾಣ ಕಾರ್ಯಗಳು ಪ್ರಾರಂಭಕ್ಕೆ ಮೊದಲು ವಾಸ್ತವ ಮತ್ತು ದುರಸ್ಥಿ ಬಳಿಕದ ಪೋಟೋಗಳನ್ನು ಇಲಾಖೆಯ SAT ತಂತ್ರಾಂಶದಲ್ಲಿ ದೃಢಿಕರಿಸುವಂತೆ ತಿಳಿಸಿದ್ದಾರೆ.