ಬೆಂಗಳೂರು : ‘ಸಾಹಿತ್ಯ, ಕಲೆ , ಸಂಸ್ಕೃತಿ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಉತ್ತೇಜನ ನೀಡುವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿ. ನಮ್ಮ ಸರ್ಕಾರ ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದರಲ್ಲಿ ಹಿಂದೆ ಬೀಳುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜನವರಿ 31 ರಂದು (ಬುಧವಾರ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ “2021 ರಿಂದ 2024ನೇ ಸಾಲಿನ ಜೀವಮಾನ ಸಾಧನೆಯ ವಿವಿಧ ಪ್ರಶಸ್ತಿಗಳನ್ನು ನಾಡಿನ ವಿವಿಧ ಗಣ್ಯರಿಗೆ ಪ್ರದಾನ” ಸಮಾರಂಭದಲ್ಲಿ ಮಾತನಾಡಿದ ಸಿಎಂ, ‘ಪ್ರಶಸ್ತಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿ ನಿರ್ಣಯವೇ ಅಂತಿಮ. ನಾವು ಮೂಗು ತೂರಿಸುವುದಿಲ್ಲ. ಈ ವಿಚಾರದಲ್ಲಿ ನಾನು ಬಹಳ ನಿಷ್ಠುರವಾಗಿ ವರ್ತಿಸುತ್ತೇನೆ. ನನ್ನ ಮೇಲೆ ಒತ್ತಡ ಹಾಕುವ ಎಲ್ಲರಿಗೂ ನಾನು ಅಷ್ಟೆ ನಿಷ್ಠುರವಾಗಿ ಹೇಳಿ ಬಿಡುತ್ತೇನೆ ಎಂದರು.
‘ನಮ್ಮ ಸರ್ಕಾರ ಜನರ ನಂಬಿಕೆಗಳನ್ನು ಗೌರವಿಸುತ್ತದೆ. ಬಸವಣ್ಣನವರು ಮೌಡ್ಯ ಮುಕ್ತ, ಜಾತಿ ಮುಕ್ತ, ವರ್ಗ ಮುಕ್ತ ಸಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ್ದರು. ಅದಕ್ಕೆ ದೇಹವೇ ದೇಗುಲ ಎಂದು ವಚನಕಾರರು ಪ್ರತಿಪಾದಿಸಿದ್ದಾರೆ. ಆದರೆ ಕೆಲವರು ದೇವಸ್ಥಾನದಲ್ಲಿ ಮಾತ್ರ ದೇವರಿದ್ದಾನೆ ಎಬ್ನುವ ನಂಬಿಕೆಯಿಂದ ಹೋಗುತ್ತಾರೆ. ಅವರ ನಂಬಿಕೆಯನ್ನೂ ಗೌರವಿಸುತ್ತೇವೆ. ದೇವಸ್ಥಾನಕ್ಕೆ ಹೋಗುವವರು ಅವರ ಇಷ್ಟದ ಉಡುಪು ಧರಿಸಿ ಹೋಗಬಹುದು. ಈ ವಿಚಾರದಲ್ಲೂ ನಮ್ಮದೇನೂ ಅಭ್ಯಂತರ ಇಲ್ಲ. ದೇವರು, ಧರ್ಮದ ಬಗ್ಗೆ ಯಾರ ನಂಬಿಕೆ ಏನೇ ಇದ್ದರೂ ಎಲ್ಲರೂ ಮೊದಲು ಮನುಷ್ಯರಾಗಬೇಕು. ಮನುಷ್ಯ ಮನುಷ್ಯರನ್ನು ದ್ವೇಷಿಸಬಾರದು. ಇದೇ ಅತ್ಯುನ್ನತ ಮೌಲ್ಯ’ ಎಂದರು.
‘ರವೀಂದ್ರ ಕಲಾಕ್ಷೇತ್ರ ಮತ್ತು ಸಂಸರಂಗ ಮಂದಿರ ನವೀಕರಣಕ್ಕೆ ಇಷ್ಟೆ ಖರ್ಚು ಮಾಡಬೇಕು ಎನ್ನುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. 24 ಕೋಟಿ ರೂಪಾಯಿ ಖರ್ಚು ಮಾಡಿ ನವೀಕರಣ ಮಾಡುತ್ತಿದೆ ಎನ್ನುವುದು ಸರಿಯಲ್ಲ. ಮೊತ್ತದ ಬಗ್ಗೆ ಯಾವ ತೀರ್ಮಾನವೂ ಆಗಿಲ್ಲ’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಶಿವರಾಜ ತಂಗಡಗಿ, ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ ಇದ್ದರು.