ಕುಕನೂರು : “ಶೈಕ್ಷಣಿಕ, ಆರ್ಥಿಕ, ಹಾಗೂ ಸಾಮಾಜಿಕವಾಗಿ ನಮ್ಮ ಸಮಾಜ ಹಿಂದೆ ಉಳಿದಿದೆ. ಜೊತೆಗೆ ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಈ ಹೋರಾಟ ಅಗತ್ಯವಿದೆ” ಎಂದು ಗಂಗಾಮತದ ರಾಜ್ಯ ಸಮಿತಿಯ ಸದಸ್ಯ ರಾಮು ಕೌಧಿ ಅಭಿಪ್ರಾಯಪಟ್ಟರು.
ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ” ಇದೇ ಫೆಬ್ರವರಿ 25 ರಂದು ಕಲಬುರ್ಗಿಯಲ್ಲಿ “ಕೋಲಿ ಕಬ್ಬಲಿಗ ರಾಜ್ಯ ಮಟ್ಟದ ಬೃಹತ್ ಸಮಾವೇಶ” ಜನ ಜಾಗೃತಿ ಹಾಗೂ ಎಸ್‌ಟಿ ಪಟ್ಟಿಗೆ ಸೇರಿಸಲು ಒತ್ತಾಯಿಸುವ ಸಮಾರಂಭದಲ್ಲಿ ರಾಜ್ಯದ ಮೂಲೆಗಳಿಂದ ಗಂಗಾಮತದ ಸಮಾಜದ ಜನರು ಸೇರಲಿದ್ದಾರೆ. ನಾವು ಸರ್ಕಾರದ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳಬೇಕಾದರೇ ನಾವು ಎಸ್‌ಟಿ ಪಟ್ಟಿಗೆ ಸೇರಲೇಬೇಕಾದ ಅನಿವಾರ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರುಗಳಾದ ಶಿವಪುತ್ರಪ್ಪ ಮಡ್ಡಿ, ಬಾಳಪ್ಪ ಬಾರಕೇರ, ಬುಡ್ಡಪ್ಪ ಬಾರಕೇರ, ಮಂಜುನಾಥ್ ಬಾರಕೇರ ಮತ್ತಿತರರು ಇದ್ದರು.