ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ 1,100 ಕೋಟಿ ಬಂಪರ್ ಅನುದಾನ.
ಕುಕನೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024 ರ ಆಯ ವ್ಯಯದಲ್ಲಿ ತಮ್ಮ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ್ ರಾಯರಡ್ಡಿ ಪ್ರತಿನಿದಿಸುವ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 1,100 ಕೋಟಿ ಮೊತ್ತದ ಬಂಪರ್ ಅನುದಾನದ ಕೊಡುಗೆ ನೀಡಿದ್ದಾರೆ.
ಬಹು ನಿರೀಕ್ಷಿತ ಯಲಬುರ್ಗಾ ಕುಕನೂರು ಅವಳಿ ತಾಲೂಕಿನ ಕುಡಿಯುವ ನೀರು ಮತ್ತು ಕೆರೆ ತುಂಬಿಸುವ ಯೋಜನೆಗೆ ಬರೋಬ್ಬರಿ 970 ಕೋಟಿ ಮೊತ್ತದ ಅನುದಾನ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಅವಳಿ ತಾಲೂಕಿನ 38 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು ಇದಕ್ಕಾಗಿ ಸುಮಾರು 2 ಸಾವಿರ ಎಕರೆ ಜಮೀನು ಸ್ವಾದಿನಪಡಿಸಿಕೊಳ್ಳಲಾಗುತ್ತಿದೆ. 38 ಕೆರೆಗೆ ನೀರು ತುಂಬಿಸಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು, ರೈತರ ಜಮೀನುಗಳಿಗೆ ಅಂತರ್ ಜಲ ಹೆಚ್ಚಿಸುವುದು ಈ ಯೋಜನೆ ಉದ್ದೇಶ. ಇದಕ್ಕೆ 2024 ರ ಈ ಬಜೆಟ್ ನಲ್ಲಿ 970 ಕೋಟಿ ಮೊತ್ತದ ಅನುದಾನ ಸಿಕ್ಕಿದ್ದು ಯೋಜನೆ ಶೀಘ್ರದಲ್ಲಿ ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ.
ತಾಲೂಕಿನ ತಳಕಲ್ ನಲ್ಲಿರುವ ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ 120 ಕೋಟಿ ಅನುದಾನ ಮೀಸಲಿಟ್ಟಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರವಾಗಿ ಉನ್ನತಿಕರಣಗೊಳ್ಳಲಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎ ಪಿ ಎಂ ಸಿ ಯಾರ್ಡ್ ನಲ್ಲಿ ಶಿಥಿಲ ಘಟಕ ನಿರ್ಮಾಣಕ್ಕೆ 10 ಕೋಟಿ ಅನುದಾನ ಕೊಡಲಾಗಿದೆ. ರೈತರ ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮೂಲಕ ಈ ಯೋಜನೆ ರೈತರಿಗೆ ಅನುಕೂಲ ಆಗಲಿದೆ.
ಹೀಗೆ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ 2024 ರ ಬಜೆಟ್ ನಲ್ಲಿ ಒಟ್ಟು ಒಂದು ಸಾವಿರದ ನೂರು ಕೋಟಿ ದೊಡ್ಡ ಮೊತ್ತದ ಅನುದಾನ ಸಿಕ್ಕಿದೆ.
ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಮತ್ತು ಆರ್ಥಿಕ ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜ್ ರಾಯರಡ್ಡಿ ಅವರ ನಿರೀಕ್ಷೆ ಹುಸಿಗೊಳಿಸದೇ ಬಂಪರ್ ಕೊಡುಗೆ ನೀಡಿದ್ದಾರೆ.
ಇದರ ಜೊತೆಗೆ ಯಲಬುರ್ಗಾ ಕುಕನೂರು ತಾಲೂಕಿನಲ್ಲಿ ಕೆರೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ರಾಜ್ಯದ ಇತರ ಜಿಲ್ಲೆಗಳು ಒಳಗೊಂಡಂತೆ ಒಟ್ಟು 850 ಕೋಟಿ ರೂ ಗಳ ಅನುದಾನ ಘೋಷಣೆ ಮಾಡಲಾಗಿದೆ.