ಮಂಡ್ಯ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿಗೆ ಬೆಂಬಲಿಸಿರುವ ಸುಮಲತಾ ಅಂಬರೀಶ್ ಗೆ ಟಿಕೇಟ್ ನೀಡಬೇಕೋ ಅಥವಾ ಮೈತ್ರಿ ಪಕ್ಷದ ಜೆಡಿಎಸ್ ಅಭ್ಯರ್ಥಿಗೆ ನೀಡಬೇಕೋ ಎಂಬುವುದು ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ. ಇದೀಗ ಸುಮಲತಾ ಅಂಬರೀಶ್ ಅವರ ಸ್ಥಿತಿ ಈಗ ಅತಂತ್ರವಾಗಿದೆ. ಇದರ ಬೆನ್ನಲ್ಲೆ ಇದೀಗ ಸುಮಲತಾ ಲೋಕಸಭಾ ಅವಧಿ ಮುಗಿದ ಬಳಿಕ ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನಾವು ಮಾಡಿದ ಕೆಲಸದ ಪಟ್ಟಿ, ನಮ್ಮ ಕೆಲಸ ನೋಡಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಅದಕ್ಕೆ ನನಗೆ ಮೈತ್ರಿ ಟಿಕೆಟ್ ಸಿಗುವ ಬಗ್ಗೆ ಪೂರ್ಣ ವಿಶ್ವಾಸವಿದೆ. ಲೋಕಸಭಾ ಅವಧಿ ಮುಗಿದ ಬಳಿಕ ನಾನು ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತೇನೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿರುವುದರಿಂದ ಇಷ್ಟು ದಿನ ಸೇರಲಾಗುತ್ತಿಲ್ಲ ಎಂದು ಅವರು ತಿಳಿಸಿದರು.
ಬಿಜೆಪಿ ಪಕ್ಷದ ವರಿಷ್ಠರಿಂದ ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಯಾವುದೂ ಫೈನಲ್ ಆಗುವುದಿಲ್ಲ. ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ನನಗಿದೆ. ಅದು ನನ್ನ ವೈಯಕ್ತಿಕ. ಆದರೆ, ಪಕ್ಷದಿಂದ ಬರುವುದೇ ಅಧಿಕೃತ ಘೋಷಣೆ. ಕಳೆದ ಸಂಸದರು ಮಾಡಿರುವ ಕೆಲಸಕ್ಕೂ ನನ್ನ ಕೆಲಸಕ್ಕೂ ವ್ಯತ್ಯಾಸವಿದೆ. ಬಿಜೆಪಿ ಸಿದ್ಧಾಂತ, ನರೇಂದ್ರ ಮೋದಿಯವರ ಕೆಲಸದ ರೀತಿ ನೋಡಿ ನಾನು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ ಎಂದರು.