ಸಂಗಣ್ಣ ಕರಡಿ – ರಾಯರಡ್ಡಿಯವರ ಅವಿರತ ಶ್ರಮ, ಮೋದಿಯಿಂದ ಲೋಕಾರ್ಪಣೆಗೊಂಡ ತಳಕಲ್ – ಲಿಂಗನಬಂಡಿ ರೈಲು ಮಾರ್ಗ.
ಕೊಪ್ಪಳ : ಬಹು ನಿರೀಕ್ಷಿತ ತಳಕಲ್ – ಲಿಂಗನಬಂಡಿ ನೂತನ ರೈಲು ಮಾರ್ಗ ಇಂದು ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆಗೊಂಡಿದೆ.
ದಶಕಗಳ ಕನಸಾಗಿದ್ದ ಗದಗ್ ವಾಡಿಯ ರೈಲು ಸಂಚಾರದ ಕನಸು ಇನ್ನೇನು ಕೆಲವೇ ದಿನಗಳಲ್ಲಿ ನನಸಾಗಳಿದ್ದು ಜನಸಾಮಾನ್ಯರು ತಳಕಲ್, ಕುಕನೂರು, ಯಲಬುರ್ಗಾ, ಲಿಂಗನಬಂಡಿ, ಕುಷ್ಟಗಿ ಮಾರ್ಗದಲ್ಲಿ ರೈಲ್ವೆಯಲ್ಲಿ ಓಡಾಡಬಹುದು.
ಇಂದು ಮಂಗಳವಾರ ಯಲಬುರ್ಗಾ ತಾಲೂಕಿನ ಲಿಂಗನಬಂಡಿಯಲ್ಲಿ ಸಂಸದ ಕರಡಿ ಸಂಗಣ್ಣ, ಜಿಲ್ಲಾ ಬಬಿಜೆಪಿ ಅಧ್ಯಕ್ಷ ನವೀನ್ ಕುಮಾರ್ ಗುಳಗಣ್ಣವರ್, ಮಾಜಿ ಸಚಿವ ಹಾಲಪ್ಪ ಆಚಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅರವಿಂದ್ ಗೌಡ ಪಾಟೀಲ್, ಇತರ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಂದ ನೆರವೇರಿದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗದಗ್ ವಾಡಿ ರೈಲ್ವೇ ಯೋಜನೆ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಬಂದಿದ್ದೆ ರೋಚಕ ಹೋರಾಟದಿಂದ ಎನ್ನಬಹುದು. ಅಂದಿನ ಕೇಂದ್ರ ರೈಲ್ವೆ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರಿಂದ ಗದಗ್ ರೈಲ್ವೆ ಯೋಜನೆ ಘೋಷಣೆಯಾಗಿತ್ತು, ಮೊದ ಮೊದಲು ಈ ಯೋಜನೆಯ ಗದಗ್, ಗಜೇಂದ್ರ ಗಡ ಮೂಲಕ ಬೇರೆ ಮಾರ್ಗದಲ್ಲಿ ಸಂಚರಿಸುವ ನಕ್ಷೆ ಹಾಕಿಕೊಳ್ಳಲಾಗಿತ್ತು, ಆದರೆ ಶಾಸಕ, ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಅವರ ಸತತ ಪ್ರಯತ್ನದಿಂದ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ತಳಕಲ್ ಕುಕನೂರು ಮೂಲಕ ಸಂಚಾರ ನಕ್ಷೆ ಬದಲಾಗಿ ಯೋಜನೆ ಅನುಮೋದನೆ ಪಡೆದುಕೊಂಡಿತ್ತು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬದಲಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕೊಪ್ಪಳ ಸಂಸದ ಸಂಗಣ್ಣ ಕರಡಿಯವರ ಅವಿರತ ಶ್ರಮ, ಮುತುವರ್ಜಿಯಿಂದ ಕೊನೆಗೂ ರೈಲ್ವೆ ಯೋಜನೆ ಪೂರ್ಣ ಗೊಂಡು ಜನಸಾಮಾನ್ಯರ ಕನಸು ನನಸಾಗುವಂತಾಗಿದೆ. ಕುಷ್ಟಗಿ ವರೆಗಿನ ಕೊನೆಯ ಹಂತದ ಕಾಮಗಾರಿ ಮಾತ್ರ ಬಾಕಿ ಇದ್ದು ಶೀಘ್ರದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.
ರೈಲ್ವೆ ಯೋಜನೆ ಪ್ರಾರಂಭಗೊಳ್ಳುವಲ್ಲಿ ಬಸವರಾಜ್ ರಾಯರಡ್ಡಿ ಅವರು, ಕೇಂದ್ರದ ಬಿಜೆಪಿ ಸರ್ಕಾರ ದಿಂದ ವಿಶೇಷ ಅನುದಾನ ಕಲ್ಪಿಸಿಕೊಡುವ ಮೂಲಕ ಯೋಜನೆ ಪೂರ್ಣಗೊಳ್ಳುವಲ್ಲಿ ಸಂಸದ ಸಂಗಣ್ಣ ಕರಡಿಯವರ ಶ್ರಮ ಸೇರಿದಂತೆ ಇಬ್ಬರ ಪಾತ್ರವೂ ಕೂಡಾ ಇದರಲ್ಲಿ ಮಹತ್ವದ್ದಾಗಿದೆ ಎನ್ನಲಾಗಿದೆ.