ಏಳು ಕೋಟಿ ಸಾಲ ಇದೆ, ಕೊಪ್ಪಳ ಮನೆ ಮಾರುವ ಯೋಚನೆ ಇದೆ : ಸಂಗಣ್ಣ ಕರಡಿ ಭಾವುಕ ಮಾತು.!!!!
ಕೊಪ್ಪಳ : ನನ್ನ ರಾಜಕೀಯ ಜೀವನದಲ್ಲಿ ಕ್ಷೇತ್ರದ ಅಭಿವೃದ್ಧಿ, ಜನರ ಸೇವೆಗೆ ನನ್ನ ಸಮಯ ಮೀಸಲಿಟ್ಟಿದ್ದೇನೆ. ನಾನು ಉತ್ತಮ ಕೆಲಸ ಮಾಡಿದ್ದೇನೆ ಎಂದು ನನಗೆ ತೃಪ್ತಿ ಇದೆ. ಬೇರೆಯವರಂತೆ ನಾನು ಹಣ ಗಳಿಸಲಿಲ್ಲ, ಜನರ ಪ್ರೀತಿ, ವಿಶ್ವಾಸ ಗಳಿಸಿದ್ದೇನೆ, ಈಗಲೂ ನನಗೆ 7 ಕೋಟಿ ಸಾಲ ಇದೆ. ಅದರ ಬಗ್ಗೆ ನನಗೆ ಚಿಂತೆ ಇಲ್ಲ, ಅಗತ್ಯಬಿದ್ದರೆ ಕೊಪ್ಪಳ ನಗರದ ತಮ್ಮ ಮನೆಯನ್ನು ಮಾರಲು ಸಿದ್ದ ಎಂದು ಸಂಸದ ಸಂಗಣ್ಣ ಕರಡಿ ಭಾವುಕರಾಗಿ ಹೇಳಿದ್ದಾರೆ.
ಲೋಕಸಭೆ ಟಿಕೆಟ್ ಸಿಗದ ಹಿನ್ನೆಲೆ ಕೊಪ್ಪಳ ನಗರದ ಶಿವ ಶಾಂತವೀರ ಮಂಗಲ ಭವನದಲ್ಲಿ ಗುರುವಾರ ತಮ್ಮ ಬೆಂಬಲಿಗರ ಸಭೆಯನ್ನು ಉದ್ದೇಶಿಸಿ ಸಂಗಣ್ಣ ಕರಡಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ನನ್ನ ಇಡೀ ರಾಜಕೀಯ ಜೀವನದಲ್ಲಿ ಸೋಲಿಗಿಂತ ಗೆಲುವನ್ನೇ ಕಂಡಿದ್ದೇನೆ, ಅದಕ್ಕಿಂತ ಹೆಚ್ಚಾಗಿ ಅಭಿವೃದ್ಧಿ ಕೆಲಸ ಮಾಡಿ ನಿಮ್ಮೆಲ್ಲರ ಪ್ರೀತಿಗೆ ಪಾತ್ರರಾಗಿರುವೆ. ಇಂದಿನ ಸಭೆಗೆ ನನ್ನ ಕುಟುಂಬದ ಎಲ್ಲ ಸದಸ್ಯರನ್ನು ಬರಲು ಹೇಳಿದ್ದೇನೆ, ನನ್ನ ರಾಜಕೀಯ ಜೀವನ ಮುಂದೆ ಏನಾಗುತ್ತದೋ ಗೊತ್ತಿಲ್ಲ, 7 ಕೋಟಿ ರೂ ನಷ್ಟು ಸಾಲ ಮಾಡಿಕೊಂಡಿದ್ದೇನೆ, ಅದರ ಚಿಂತೆ ನನಗಿರಲಿ ನೀವು ನಿಮ್ಮ ದುಡಿಮೆಯ ಕಡೆಗೆ ಗಮನ ಹರಿಸಿ ಎಂದು ಸಭೆಗೆ ಬಂದಿದ್ದ ತಮ್ಮ ಕುಟುಂಬದ ಸದಸ್ಯರಿಗೆ ಸಂಗಣ್ಣ ಅವರು ಭಾವುಕವಾಗಿ ಸಲಹೆ ಮಾತಾಗಳನ್ನು ಹೇಳಿದರು.
ಟಿಕೆಟ್ ತಪ್ಪಿದ ಬಗ್ಗೆ ಬಿಜೆಪಿ ಪಕ್ಷದ ಅನೇಕ ಹಿರಿಯ ನಾಯಕರು, ಹಿತೈಷಿಗಳು ತಮ್ಮ ಜೊತೆ ಮಾತನಾಡಿದ್ದಾರೆ, ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ ಸೇರಿದಂತೆ ವರಿಷ್ಠರೂ ಕೂಡಾ ಮಾತನಾಡಿದ್ದು 3- 4 ದಿನ ಸಮಯ ಕೇಳಿದ್ದಾರೆ, ನೋಡೋಣ, ಏನಾಗುತ್ತದೆಯೋ ಏನೋ ಎಂದು ಹೇಳಿರುವ ಸಂಗಣ್ಣ ಕರಡಿ ಅವರು, ಮೂರ್ ನಾಲ್ಕು ದಿನಗಳ ನಂತರ ವರಿಷ್ಠರ ಸೂಕ್ತ ತೀರ್ಮಾನ ಕೈಗೊಳ್ಳುವ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.
ತಮಗೆ ಟಿಕೆಟ್ ತಪ್ಪುವಲ್ಲಿ ಹಲವು ಮಾಜಿ, ಹಾಲಿ ಶಾಸಕರು ಕಾರಣರಾಗಿದ್ದಾರೆ ಎಂದು ಅವರ ವಿರುದ್ದ ಸಂಗಣ್ಣ ಅವರು ಅಸಮಾಧಾನ ಹೊರಹಾಕಿದರು.
ಇಂದಿನ ಸಭೆಯಲ್ಲಿ ಕೊಪ್ಪಳ ಲೋಕಸಭೆಯ 8 ವಿಧಾನಸಭಾ ಕ್ಷೇತ್ರದಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಕಾರ್ಯಕರ್ತರು ಭಾಗವಹಿಸಿದ್ದರು. ಸಂಗಣ್ಣ ಕರಡಿ ಅವರಿಗೆ ನೈತಿಕ ಬೆಂಬಲ, ಆತ್ಮ ಸ್ಥೈರ್ಯ ತುಂಬಿದ್ದಾರೆ.
ಒಟ್ಟಿನಲ್ಲಿ ಮೂರ್ ನಾಲ್ಕು ದಿನದ ಮಟ್ಟಿಗೆ ಕಾದು ನೋಡುವ ತಂತ್ರಕ್ಕೆ ಸಂಗಣ್ಣ ಕರಡಿ ಅವರು ಮೊರೆ ಹೋಗಿದ್ದು ಮುಂದಿನ ತೀರ್ಮಾನ ಬಿಜೆಪಿ ಪಕ್ಷದ ವರಿಷ್ಠರೂ ಕೈಗೊಳ್ಳುವ ತೀರ್ಮಾನದ ಮೇಲೆ ಸಂಗಣ್ಣನವರ ಭವಿಷ್ಯ ನಿಂತಿದೆ ಎನ್ನಬಹುದು.
ವರದಿ : ಈರಯ್ಯ ಕುರ್ತಕೋಟಿ.