ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅತ್ಯುತ್ತಮ ಕಾರ್ಯ : ಸಚಿವ ಡಾ.ಜಿ.ಪರಮೇಶ್ವರ ಸಂತಸ!

You are currently viewing ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅತ್ಯುತ್ತಮ ಕಾರ್ಯ : ಸಚಿವ ಡಾ.ಜಿ.ಪರಮೇಶ್ವರ ಸಂತಸ!

ಹೊಸಪೇಟೆ (ವಿಜಯನಗರ ಜಿಲ್ಲೆ) : ನೂತನ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿಜಯನಗರ ಜಿಲ್ಲೆಯಲ್ಲಿ ಪೊಲೀಸ್ ಅಧೀಕ್ಷಕರ ಕಚೇರಿ, ಡಿಎಆರ್ ಘಟಕದ ಆಡಳಿತ ಕಟ್ಟಡ, ಪೇರೆಡ್ ಮೈದಾನ ನಿರ್ಮಾಣ ಸೇರಿದಂತೆ ಅತ್ಯುತ್ತಮ ಕಾರ್ಯಗಳಾಗುತ್ತಿವೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಹೇಳಿದರು.

2021-22ನೇ ಸಾಲಿನ ವಿಶೇಷ ಅನುದಾನ ಪ್ರಯೋಜನೆ ಅಡಿ ಹೊಸಪೇಟೆ ನಗರದಲ್ಲಿ ಮಂಜೂರಾದ ಜಿಲ್ಲಾ ಸಶಸ್ತç ಮೀಸಲು ಪಡೆ ಕಚೇರಿಯ ನೂತನ ಕಟ್ಟಡವನ್ನು ಹೊಸಪೇಟೆಯ ಡಿಎಆರ್ ಕಟ್ಟಡ ಪರೇಡ್ ಗ್ರೌಂಡ್ ಆವರಣದಲ್ಲಿ ಆಗಸ್ಟ್ 7ರಂದು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಯಾವುದೇ ಇರಲಿ ಹೊಸ ಜಿಲ್ಲೆಯಾಗಿ ರಚನೆಯಾದಾಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒಂದಷ್ಟು ಸಮಯ ಹಿಡಿಯುತ್ತದೆ. ಆದರೆ, ಒಂದು ವರ್ಷ 10 ತಿಂಗಳಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿರುವುದು ಒಳ್ಳೆಯ ಬೆಳವಣಿಗೆ. ಈ ದಿಶೆಯಲ್ಲಿ ಸ್ಥಳೀಯ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರ ಶ್ರಮ, ಬದ್ಧತೆಯು ಶ್ಲಾಘನೀಯವಾದುದು ಎಂದರು.

ನೂತನ ಜಿಲ್ಲೆಯಾಗಿ ಕೆಲವೇ ವರ್ಷಗಳಲ್ಲಿ ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಸುಸಜ್ಜಿತವಾಗಿ ಬೃಹತ್ ವಿಶಾಲ ಆವರಣದಲ್ಲಿ ನಿರ್ಮಾಣವಾಗಿರುವುದು ಸಂತಸದ ಸಂಗತಿ. ಈ ದಿಶೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್. ಮತ್ತು ಅವರ ತಂಡದವರ ಕಾರ್ಯವೈಖರಿಯು ಶ್ಲಾಘನೀಯವಾದುದು ಎಂದರು. ಇಡೀ ದೇಶದಲ್ಲಿ ಉತ್ತಮ ಎಂದು ಕರ್ನಾಟಕ ಪೊಲೀಸ್ ಇಲಾಖೆ ಬಿರುದು ಪಡೆದುಕೊಂಡಿದೆ. ಕರ್ನಾಟಕ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಸ್ಥಳೀಯ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಮಾತನಾಡಿ, ಡಾ.ಜಿ.ಪರಮೇಶ್ವರ ಅವರು ಗೃಹ ಸಚಿವರಾದ ಬಳಿಕ ನೀಡಿದ ಸಹಕಾರದಿಂದಾಗಿ ವಿಜಯನಗರ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಕಳೆದೊಂದು ವರ್ಷದಿಂದ ಸಾಕಷ್ಟು ಹೊಸತನ ಕಾಣುತ್ತಿದೆ. ಇದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು. ವಿಜಯನಗರ ಜಿಲ್ಲೆಯಲ್ಲಿ ಈಗಾಗಲೇ ಜಾಗ ನಿಗದಿಪಡಿಸಿದ್ದು ಮಹಿಳಾ ಪೊಲೀಸ್ ಠಾಣೆ ನಿರ್ಮಾಣವಾಗಬೇಕಿದೆ. ಟ್ರಾಪಿಕ್ ಪೊಲೀಸ್ ಠಾಣೆ ಸಹ ಹೊಸದಾಗಿ ನಿರ್ಮಾಣವಾಗಬೇಕಿದೆ. ಜಿಲ್ಲೆಯಲ್ಲಿ ಪೊಲೀಸ್ ಕೊರತೆ ಇದೆ. 130 ಜನರು ಮಾತ್ರ ಇದ್ದಾರೆ. ಜಿಲ್ಲೆಯಾಗಿ ಘೋಷಣೆಯಾದ ಮೇಲೆ ಹೊಸಪೇಟೆಯಲ್ಲಿ ಬಾಡಿಗೆ ಹೆಚ್ಚಾಗಿದೆ. ಬಾಡಿಗೆ ಹೆಚ್ಚಾಗುತ್ತದೆ ಎಂದು ಇಲ್ಲಿಗೆ ಬರಲು ನೌಕರರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ವಸತಿ ಗೃಹಗಳು ನಿರ್ಮಾಣವಾಗಬೇಕಿದೆ. ಪೊಲೀಸ್ ಇಲಾಖೆಗೆ ವಾಹನಗಳ ಅವಶ್ಯಕತೆ ಇದೆ ಎಂದು ಶಾಸಕರು ತಿಳಿಸಿದರು.

ವಿಜಯನಗರ ಜಿಲ್ಲೆಗೆ ನೂತನವಾಗಿ ಐಜಿ, ಡಿಜಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಆಗಬೇಕಿದೆ. ಈ ಬಗ್ಗೆ ತಾವು ಪತ್ರ ಬರೆದು ನಿರಂತರ ಪ್ರಯತ್ನ ಮಾಡುವುದಾಗಿ ಶಾಸಕರು ತಿಳಿಸಿದರು. ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಬಿ.ಎಸ್.ಲೋಕೇಶ್‌ಕುಮಾರ್ ಅವರು ಪ್ರಾಸ್ತಾವಿಕ ಮಾತನಾಡಿ, 8 ಎಕರೆ ಜಾಗದಲ್ಲಿ ಜಿಲ್ಲಾ ಸಶಸ್ತç ಮೀಸಲು ಪಡೆ ಕಚೇರಿಯ ಕಟ್ಟಡ, ಶ್ವಾನ ದಳ ಕಟ್ಟಡಗಳನ್ನು ಕೆಕೆಆರ್‌ಡಿಬಿಯ 4 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದೆ ಜಾಗದಲ್ಲಿ ಧ್ವಜಸ್ತಂಭ ಮತ್ತು ಪೊಲೀಸ್ ಕವಾಯತು ಮೈದಾನವನ್ನ ಸರ್ಕಾರದ ಯಾವುದೇ ಅನುದಾನವಿಲ್ಲದೇ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ನಿರ್ಮಿಸಿರುವುದು ವಿಶೇಷವಾಗಿದೆ. ಈ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್. ಮತ್ತು ಅವರ ತಂಡದವರ ಶ್ರಮ ಅತ್ಯಂತ ಶ್ಲಾಘನೀಯವಾದುದಾಗಿದೆ ಎಂದು ಹೇಳಲು ಹರ್ಷ ಎನಿಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎನ್.ಮಹಮ್ಮದ್ ಇಮಾಮ್ ನಿಯಾಜಿ, ಪೊಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಆರ್.ಹಿತೇಂದ್ರ, ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಕ್ರಮ ಅಲಿ ಶಾ., ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮ್ ಎಲ್ ಅರಸಿದ್ದಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಲೀಮ್ ಪಾಶಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್. ಅವರು ಸ್ವಾಗತಿಸಿದರು. ಶಿಕ್ಷಕರಾದ ಬಸವರಾಜ ಅವರು ನಿರೂಪಿಸಿದರು.
ಭೂಮಿಪೂಜೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹಿಂದಿನ ನೂತನ ಡಿಎಆರ್ ಕಟ್ಟಡ ಪರೇಡ್ ಗ್ರೌಂಡ್ ಆವರಣದಲ್ಲಿ ಆಗಸ್ಟ್ 7ರಂದು ನಡೆದ ಈ ಕಾರ್ಯಕ್ರಮದಲ್ಲಿ, ಪೊಲೀಸ್ ಗೃಹ-25 ಯೋಜನೆಯಡಿ 36 ವಸತಿ ಗೃಹಗಳನ್ನು ನಿರ್ಮಾಣ ಮಾಡುವುದಕ್ಕೆ ಗೃಹ ಸಚಿವರು ಭೂಮಿಪೂಜೆಯನ್ನು ಸಹ ನೆರವೇರಿಸಿದರು. ಜೊತೆಗೆ ಪೊಲೀಸ್ ಕವಾಯತು ಮೈದಾನ, ಧ್ವಜ ಸ್ತಂಭವನ್ನು ಸಹ ಉದ್ಘಾಟಿಸಿದರು.

ಪ್ರತಿಭಾ ಪುರಸ್ಕಾರ : 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪೊಲೀಸ್ ಇಲಾಖೆಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮಕ್ಕಳಿಗೆ ಇದೆ ವೇಳೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆಗಳಿಗೆ ಏರಲು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುವ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶ್ಲಾಘನೀಯವಾದುದು ಎಂದು ಇದೆ ವೇಳೆ ಕಾರ್ಯಕ್ರಮದ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

error: Content is protected !!