ಭಾರಿ ಮಳೆಯಿಂದಾಗಿ ಗ್ರಾಮಕ್ಕೆ ನುಗ್ಗಿದ ನೀರು : ಡಿ.ಸಿ. ನಲೀನ್ ಅತುಲ್ ಅವರಿಂದ ಪರಿಶೀಲನೆ!
ಕುಷ್ಟಗಿ : ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಆಗಸ್ಟ್ 17ರಂದು ಕುಷ್ಟಗಿ ತಾಲೂಕಿನ ಟೆಂಗುಂಟಿ ಗ್ರಾಮಕ್ಕೆ ಭೇಟಿ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಆಗಸ್ಟ್ 16ರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕುಷ್ಟಗಿ ಹೋಬಳಿಯ ಟೆಂಗಂಟಿ ಗ್ರಾಮಕ್ಕೆ ಹೊಂದಿಕೊಂಡಿರುವ ಹಳ್ಳವು ತುಂಬಿ ಗ್ರಾಮಕ್ಕೆ ನುಗ್ಗಿ ಹಾನಿಯಾದ ಬಗ್ಗೆ ಇದೆ ವೇಳೆ ತಾಲೂಕಿನ ತಹಸೀಲ್ದಾರರು ಮತ್ತು ಗ್ರಾಮ ಪಂಚಾಯತ್ ಪಿಡಿಓ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದೇ ವೇಳೆಯಲ್ಲಿ ಮಳೆಯಿಂದಾದ ಹಾನಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಇದೆ ವೇಳೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಮಳೆಯಿಂದಾಗಿ ಹಾನಿ ಅನುಭವಿಸಿದ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಲು ಕೂಡಲೇ ಅಗತ್ಯ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು, ಕುಷ್ಟಗಿ ತಹಸೀಲ್ದಾರರಾದ ಅಶೋಕ ಶಿಗ್ಗಾಂವಿ ಅವರಿಗೆ ನಿರ್ದೇಶನ ನೀಡಿದರು. ಮಳೆಯಿಂದ ಹಾನಿ ಅನುಭವಿಸಿದ ಸಂತ್ರಸ್ಥರಿಗೆ ಕೂಡಲೇ ಕಾಳಜಿ ಕೇಂದ್ರ ತೆರೆದು ಅವರಿಗೆ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಅಂದಾಜು ಪಟ್ಟಿ ತಯಾರಿಸಲು ಸೂಚನೆ: ಮಳೆ ಜೋರಾಗಿ ಸುರಿದಾಗೊಮ್ಮೆ ಹಳ್ಳವು ತುಂಬಿ ಹರಿದು ಈ ರೀತಿ ತೊಂದರೆಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಹಳ್ಳದ ನೀರು ಗ್ರಾಮಕ್ಕೆ ನುಗ್ಗದಂತೆ ತಡೆಗೋಡೆ ನಿರ್ಮಿಸುವುದು ಅತೀ ಅವಶ್ಯಕವಾಗಿದೆ ಎಂದು ಇದೆ ವೇಳೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಗ್ರಾಮಸ್ಥರ ಮನವಿಯಂತೆ ಟೆಂಗುಂಟಿ ಗ್ರಾಮದಲ್ಲಿರುವ ಹಳ್ಳಕ್ಕೆ ತಡೆಗೋಡೆ ನಿರ್ಮಿಸುವ ಕುರಿತು ಅಂದಾಜು ವೆಚ್ಚದ ಪಟ್ಟಿಯನ್ನು ತಯಾರಿಸಿ ಪ್ರಸ್ತಾವನೆಯನ್ನು ಕೂಡಲೇ ಸಿದ್ಧಪಡಿಸಿ ಸಲ್ಲಿಸಲು ಅಗತ್ಯಕ್ರಮ ವಹಿಸಬೇಕು ಎಂದು ತಹಸೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಚೆಕ್ ಡ್ಯಾಮಗೆ ಭೇಟಿ: ಟೆಂಗುಂಟಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಜಿಲ್ಲಾಧಿಕಾರಿಗಳು, ಗ್ರಾಮದಲ್ಲಿನ ಚೆಕ್ ಡ್ಯಾಮ್ ವೀಕ್ಷಣೆ ನಡೆಸಿದರು. ಈ ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಸ್ಥಾನದಲ್ಲಿದ್ದು ಕಾರ್ಯ ನಿರ್ವಹಿಸುವಂತೆ ಇದೆ ವೇಳೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.