ಬೆಂಗಳೂರು : 18 ವರ್ಷ ತುಂಬಿದ ಎಲ್ಲಾ ಯುವ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವವರಿಗೆ ಕೇಂದ್ರ ಚುನಾವಣಾ ಆಯೋಗ ಸಿಹಿ ಸುದ್ದಿ ನೀಡಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ ಪ್ರಕಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಅರ್ಹತಾ ದಿನಾಂಕವು 2025ರ ಜನವರಿ 01 ರಂತೆ ಭಾವಚಿತ್ರ ಸಹಿತ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಪೂರ್ವ ಪರಿಷ್ಕರಣೆ ಕಾರ್ಯದಲ್ಲಿ ರಾಜ್ಯದ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುತ್ತಾರೆ. ಈ ವೆಳೆಯಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿಗಳು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ ಮತ್ತು ಮುಂಬರುವ ಅರ್ಹತಾ ದಿನಾಂಕಗಳಂತೆ 18 ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಆಯೋಗ ತಿಳಿಸಿದೆ.
ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ “ವಿಶೇಷ ಅಭಿಯಾನ” ದಿನಾಂಕಗಳನ್ನು ನಿಗಧಿಪಡಿಸಲಾಗಿದ್ದು, ಸಾರ್ವಜನಿಕರು ವಿಶೇಷ ಅಭಿಯಾನಗಳ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಹಾಗೂ ಅವಶ್ಯವಿರುವ ತಿದ್ದುಪಡಿ, ಸೇರ್ಪಡೆ ಹಾಗೂ ತೆಗೆದುಹಾಕುವಿಕೆಗಳಿಗೆ ಅರ್ಜಿಗಳನ್ನು ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.