LOCAL NEWS : ಐದು ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ-2025 ಆರಂಭ : ಎಂ.ಎಸ್.ದಿವಾಕರ

You are currently viewing LOCAL NEWS : ಐದು ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ-2025 ಆರಂಭ : ಎಂ.ಎಸ್.ದಿವಾಕರ

ಐದು ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ-2025 ಆರಂಭ : ಎಂ.ಎಸ್.ದಿವಾಕರ

ಹೊಸಪೇಟೆ (ವಿಜಯನಗರ) : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025 ಪ್ರಕ್ರಿಯೆಯು ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಒಟ್ಟು 1234 ಮತಗಟ್ಟೆ ಕೇಂದ್ರಗಳಲ್ಲಿ ಆಗಸ್ಟ್ 20ರಿಂದ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.

ಪೂರ್ವ ಪರಿಷ್ಕರಣೆ ಚಟುವಟಿಕೆ ಸಮಯದಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಎಲ್ಲಾ ಮತದಾರರ ಮನೆಗೆ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿಗಳು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ ಮತ್ತು ಮುಂಬರುವ ಅರ್ಹತಾ ದಿನಾಂಕಗಳಂತೆ 18 ವರ್ಷ ತುಂಬುವ ಯುವ ಮತದಾರರು ಹೆಸರು ಸೇರ್ಪಡೆ ಕುರಿತು ಅರ್ಜಿ ಸಲ್ಲಿಸಬಹುದಾಗಿದೆ.

ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ವಿಶೇಷ ಅಭಿಯಾನ ನವೆಂಬರ್ 9 ಮತ್ತು 10 ಹಾಗೂ ಡಿಸೆಂಬರ್ 14 ಮತ್ತು 15ರಂದು ನಿಗದಿಪಡಿಸಲಾಗಿದೆ. ಸಾರ್ವಜನಿಕರು ಈ ವಿಶೇಷ ಅಭಿಯಾನದ ಸೌಲಭ್ಯ ಬಳಸಿಕೊಳ್ಳುವಂತೆ ಹಾಗೂ ಅವಶ್ಯವಿರುವ ತಿದ್ದುಪಡಿ, ಸೇರ್ಪಡೆ ಹಾಗೂ ತೆಗೆದು ಹಾಕುವಿಕೆಗಳಿಗೆ ಅರ್ಜಿಗಳ ನಮೂನೆ 6, 7, 8ನ್ನು ಸಲ್ಲಿಸಲು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಆಧಾರ್ ಸಂಖ್ಯೆ ಒದಗಿಸಬಹುದಾಗಿದೆ. ಆಗಸ್ಟ್ 20ರಿಂದ ಅಕ್ಟೋಬರ್ 18ರವರೆಗೆ ಮತಗಟ್ಟೆಮಟ್ಟದ ಅಧಿಕಾರಿಗಳಿಂದ ಮನೆಮನೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದು, ಅಕ್ಟೋಬರ್ 19ರಿಂದ ಅಕ್ಟೋಬರ್ 28ರವರೆಗೆ ನಮೂನೆ 1 ರಿಂದ 8ರ 5 ವಿಧಾನಸಭಾ ಕ್ಷೇತ್ರಗಳಿಂದ ಅಂಕಿ ಅಂಶ ಮಾಹಿತಿ ಕ್ರೂಢೀಕರಿಸಿ ಸಿದ್ಧಪಡಿಸಲಾಗುತ್ತದೆ. ಅಕ್ಟೋಬರ್ 29ರಂದು ಸಮಗ್ರ ಕರಡು ಮತದಾರ ಪಟ್ಟಿಯ ಪ್ರಕಟಿಸಲಾಗುತ್ತದೆ.

ಸಾರ್ವಜನಿಕರು ಅಕ್ಟೋಬರ್ 29ರಿಂದ ನವೆಂಬರ್ 28ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಎಲ್ಲಾ ಆಕ್ಷೇಪಣೆಗಳ ವಿಲೇವಾರಿಯನ್ನು ಡಿಸೆಂಬರ್ 24ರೊಳಗೆ ಮಾಡಲಾಗುತ್ತದೆ. ಅಂತಿಮವಾಗಿ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳ ದತ್ತಾಂಶವನ್ನು ಕ್ರೂಢೀಕರಿಸಿ ಆಯೋಗದಿಂದ 2025ರ ಜನವರಿ 6ರಂದು ಅಂತಿಮ ಮತದಾರ ಪಟ್ಟಿಯನ್ನು ಪ್ರಕಟಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!