ಮಂಗಳೂರು : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಕಲ್ಲು ತೂರಾಟ, ಚಪ್ಪಲಿ ಎಸೆದ ಪ್ರಕರಣ ಇಡೀ ರಾಜ್ಯದಲ್ಲಿ ಕೋಮು ಗಲಭೆಗೆ ಸಾಕ್ಷಿಯಾಗಿದ್ದರೆ, ಇತ್ತ ಇದೀಗ ಮಂಗಳೂರಿನಲ್ಲಿ ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 6 ಜನ ಹಿಂದೂಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು ನಗರದ ಹೊರವಲಯದ ಸುರತ್ಕಲ್ ಕಾಟಿಪಳ್ಳದಲ್ಲಿ ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಿದ್ದ ಪ್ರಕರಣ ಸಂಬಂಧ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿನ್ನೆ ಸಂಜೆ ವೇಳೆಗೆ ಹಬ್ಬದ ಪ್ರಯುಕ್ತ ಪ್ರಾರ್ಥನಾ ಮಂದಿರಕ್ಕೆ ದೀಪಾಲಂಕಾರ ಮಾಡಿ, ಒಳಗಡೆ ಕಾರ್ಯಕರ್ತರೆಲ್ಲ ಕೆಲಸ ಮಾಡಿಕೊಂಡಿದ್ದ ಸಮಯದಲ್ಲಿ ರಾತ್ರಿ 9-50 ಗಂಟೆ ಸುಮಾರಿಗೆ ಕಲ್ಲು ತೂರಾಟ ನಡೆಸಲಾಗಿದೆ. ಎರಡು ಬೈಕ್‌ಗಳಲ್ಲಿ ಜನತಾ ಕಾಲೋನಿಯ ಸ್ಮಶಾನದ ಕಡೆಯಿಂದ ಬಂದು ಮಂದಿರದ ಹಿಂಭಾಗದ ರಸ್ತೆಯ ಕಡೆಯಿಂದ ಕಲ್ಲು ಬಿಸಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕೆ.ಹೆಚ್. ಅಬ್ದುಲ್ ರಹಿಮಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಭರತ್ ಶೆಟ್ಟಿ (26), ಚೆನ್ನಪ್ಪ ಚಲವಾದಿ (19), ನಿತಿನ್ ಹಡಪ (22), ಸುಜಿತ್ ಶೆಟ್ಟಿ (23), ಗ್ರಾಮದ ಅಣ್ಣಪ್ಪ (24) ಹಾಗೂ ಪ್ರೀತಮ್ ಶೆಟ್ಟಿ (34) ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ 1 ಸ್ವಿಫ್ಟ್ ಕಾರು, 2 ಬೈಕ್ ಹಾಗೂ 4 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.