ಕುಕನೂರು : ಪ್ರತೀ ದಿನವೂ ಪಟ್ಟಣದ ಸ್ವಚ್ಛತೆಯ ಮುಖಾಂತರ ಉತ್ತಮ ಪರಿಸರ, ವಾತಾವರಣ ನಿರ್ಮಿಸುವ ಪೌರ ಕಾರ್ಮಿಕರು ಅಭಿನಂದನಿಯ ಮತ್ತು ಸಾರ್ವಜನಿಕರ ಅರೋಗ್ಯ ಸಂರಕ್ಷಕರು ಆಗಿದ್ದಾರೆ ಎಂದು ಕುಕನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಹೇಳಿದರು.
ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಸುರಕ್ಷಾ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಚ್ಛ, ಸುಂದರ ಪಟ್ಟಣವಾಗಿಸುವಲ್ಲಿ ಪೌರ ಕಾರ್ಮಿಕರ ಶ್ರಮ ಅನನ್ಯವಾಗಿದೆ. ನಾಗರೀಕ ಹಕ್ಕುಗಳ ಅಡಿಯಲ್ಲಿ ಬದುಕುವ ಎಲ್ಲರೂ ಸರಿ ಸಮಾನರು ಎಂದು ಸಾರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವತಃ ಪೌರ ಕಾರ್ಮಿಕರ ಕಾಲು ಮುಟ್ಟಿ ಪಾದವನ್ನು ತೊಳೆದು ಸಮಾನತೆಯನ್ನು ತೋರಿಸಿದರು.
ಸರ್ಕಾರದಿಂದ ಪೌರ ಕಾರ್ಮಿಕರಿಗೆ ಅನೇಕ ಸೌಲಭ್ಯಗಳಿವೆ, ಗೃಹಭಾಗ್ಯ ಯೋಜನೆಯಡಿ ಮನೆ ಕಟ್ಟಿಕೊಳ್ಳಲು 8 ಲಕ್ಷದವರೆಗೂ ಅನುದಾನ ಸಿಗುತ್ತದೆ, ಕಚ್ಚಾ ಮನೆ ನಿರ್ಮಾಣಕ್ಕೆ 50 ಸಾವಿರ ಸಿಗುತ್ತೆ, ವಿಮಾ ಸೌಲಭ್ಯ, ಅರೋಗ್ಯ ತಪಾಷಣೆ, ಶಸ್ತ್ರಚಿಕಿತ್ಸೆಗೆ ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ಸಪಾಯಿ ಕರ್ಮಚಾರಿ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ನೇರವಾಗಿ ಪ್ರವೇಶ ಸಿಗುತ್ತದೆ, ಪೌರ ಕಾರ್ಮಿಕರು ಇದೆಲ್ಲ ಪ್ರಯೋಜನ ಪಡೆದುಕೊಳ್ಳಬೇಕು ಎಂದು ರವೀಂದ್ರ ಬಾಗಲಕೋಟ ಅವರು ಹೇಳಿದರು.
ಪೌರ ಕಾರ್ಮಿಕರಿಗೆ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು, ಬಹುಮಾನ ವಿತರಣೆ ಮಾಡಲಾಯಿತು.ನಂತರ ಎಲ್ಲರಿಗೂ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ ಪಂ ಅಧ್ಯಕ್ಷೆ ಲಲಿತವ್ವ ಯಡಿಯಾಪುರ ವಹಿಸಿದ್ದರು. ಉಪಾಧ್ಯಕ್ಷ ಪ್ರಶಾಂತ್ ಆರುಬೆರಳಿನ, ಸದಸ್ಯರಾದ ಗಗನ್ ನೋಟಗಾರ್, ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ರಾಮಣ್ಣ ಬಂಕದಮನಿ, ನೂರುದ್ದಿನ್ ಸಾಬ್ ಗುಡಿಹಿಂದಲ್, ಬಾಲರಾಜ್ ಗಾಳಿ, ಜಗನ್ನಾಥ ಭೋವಿ, ಶಾದಿಕ್ ಖಾಜಿ, ಮಹಾಂತೇಶ್ ಹೂಗಾರ್, ಶಿವರಾಜ್ ಯಲ್ಲಪ್ಪಗೌಡರ್, ಯಲ್ಲಪ್ಪ ಕಲ್ಮನಿ ಸೇರಿದಂತೆ ಇತರ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.