ಬೆಂಗಳೂರು : ರಾಜ್ಯದ ಜನರಿಗೆ ಈ ಹಿಂದೆ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಲಾಗುತ್ತದೆ ಎಂದು ಹೇಳಿತ್ತು. ಅದೇ ಆತಂಕದಲ್ಲಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ. ವಿಧಾನಸಭೆ ಚುನಾವಣೆ ಇರುವುದರಿಂದ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಮುಂಬರುವ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಕರ್ನಾಟಕ ವಿದ್ಯುತ್ ಚಕ್ತಿ ನಿಯಂತ್ರಣ ಮಂಡಳಿ ವಿದ್ಯುತ್ ದರ ಪರಿಷ್ಕರಣೆ ಅನ್ವಯ ಹೊಸ ದರಗಳ ಪ್ರಕಟಣೆಯನ್ನು ಮುಂದೂಡಿದೆ ಎಂದು ತಿಳಿಸಿದೆ.
ರಾಜ್ಯದ ವಿದ್ಯುತ್ ಕಂಪನಿಗಳು ಪ್ರತಿ ಯೂನಿಟ್ ಗೆ 1.50 ರೂ ನಿಂದ ರೂ.2 ರವರೆಗೆ ವಿದ್ಯುತ್ ದರ ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿತ್ತು. ಕರ್ನಾಟಕ ವಿದ್ಯುತ್ ಚಕ್ತಿ ನಿಯಂತ್ರಣ ಮಂಡಳಿ ಎಸ್ಕಾಂಗಳ ಬೇಡಿಕೆ ಹಾಗೂ ಸಾರ್ವಜನಿಕರ ಅಭಿಪ್ರಾಯದ ನಂತರ ವಿದ್ಯುತ್ ದರ ಪರಿಷ್ಕರಣೆ ಮಾಡಿ ಹೊಸ ದರಗಳ ಪ್ರಕಟಣೆಗೆ ಸರ್ಕಾರ ಮುಂದಾಗಿತ್ತು. ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನೆಲೆ ಇದನ್ನು ಮುಂದೂಡಲಾಗಿದೆ ಎನ್ನಲಾಗಿದೆ.
ಈಗಾಗಲೇ ರಾಜ್ಯ ಸರ್ಕಾರದಿಂದ ಕೆಲ ತಿಂಗಳ ಹಿಂದಷ್ಟೇ ವಿದ್ಯುತ್ ದರ ಹೆಚ್ಚಳ ಮಾಡಿ ಜನರಿಗೆ ಶಾಕ್ ನೀಡಿದ್ದರು. ದಿನ ನಿತ್ಯದ ಅಗತ್ಯ ವಸ್ತುಗಳ ದರ ಹೆಚ್ಚಳದ ನಡುವೆ ಆಗ ವಿದ್ಯುತ್ ದರ ಹೆಚ್ಚಳದ ಬರೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಮತ್ತೆ ದರ ಹೆಚ್ಚಳದ ಪ್ರಸ್ತಾವನೆಯನ್ನು ಎಸ್ಕಾಂಗಳು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.