LOCAL NEWS : ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಮಾರ್ಚ್ ತಿಂಗಳ ಗಡುವು : ಸಚಿವ ಎನ್ ಎಸ್ ಭೋಸರಾಜು
ಕೊಪ್ಪಳ : ಸುಮಾರು 7 ವರ್ಷಗಳ ಕಾಲ ವಿಳಂಬವಾಗಿರುವ ಕೊಪ್ಪಳ – ಯಲಬುರ್ಗಾ ಕೆರೆ ತುಂಬಿಸುವ ಯೋಜನೆಯನ್ನು ಮಾರ್ಚ್ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಭೋಸರಾಜು ಅವರು ಅಧಿಕಾರಿಗಳಿಗೆ ಗಡುವು ನೀಡಿದರು.
ನಾರಾಯಣಪೇಟೆಯಲ್ಲಿ, ಕೊಪ್ಪಳ – ಯಲಬುರ್ಗಾ ಕೆರೆ ತುಂಬಿಸುವ ಯೋಜನೆಯ ಮೊದಲನೇ ಹಂತದ ಕಾಮಗಾರಿಯ ಜಾಕ್‌ವೆಲ್ ಮತ್ತು ಪಂಪ್‌ವೆಲ್ ಪರಿವೀಕ್ಷಣೆ, ಶಿವಪುರ ಗ್ರಾಮದ ಹತ್ತಿರ ಕೊಪ್ಪಳ – ಹಿರೇಹಳ್ಳಿ ಏತ ನೀರಾವರಿ ಯೋಜನೆಯ ಹಾಗೂ ಕೆರೆ ತುಂಬಿಸುವ ಕಾಮಗಾರಿಯ ಭಾನಾಪೂರು ಹತ್ತಿರ ಇರುವ ಜಾಕ್‌ವೆಲ್ ಮತ್ತು ಪಂಪ್‌ಹೌಸ್ ಪರಿವೀಕ್ಷಣೆ ನಡೆಸಿ ಸೂಚನೆ ನೀಡಿದರು.
ಕೊಪ್ಪಳ – ಯಲಬುರ್ಗಾ ಕೆರೆ ತುಂಬಿಸುವ ಏತ ನೀರಾವರಿ ಯೋಜನೆಯನ್ನು 2018 ರಲ್ಲಿ ಚಾಲನೆ ನೀಡಲಾಗಿತ್ತು. ಸುಮಾರು 6 ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ, ರೈತರಿಗೆ ಪರಿಹಾರ ಸೇರಿದಂತೆ ಹಲವಾರು ಅಡೆತಡೆಗಳು ಎದುರಾದ ಕಾರಣ ಕಾಮಗಾರಿ ಮುಗಿಸಲು ಆಗಿರಲಿಲ್ಲ. ಈ ಯೋಜನೆಗಳನ್ನು ಮುಗಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಎರಡು ಬಾರಿ ಸಭೆಯನ್ನು ನಡೆಸಲಾಗಿತ್ತು.
ಈ ಭಾಗದ ಜನಪ್ರತಿನಿಧಿಗಳ ಸಹಯೋಗದಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಇದ್ದಂತಹ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ ನಡೆಸಲು ಅನುಮತಿ ದೊರಕಿದೆ. ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೂಡಿ ಇಂದು ಕಾಮಗಾರಿಯ ಪರಿಶೀಲನೆ ನಡೆಸಲಾಗಿದೆ. ಕಾಮಗಾರಿಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಮಾರ್ಚ್ ತಿಂಗಳಾಂತ್ಯಕ್ಕೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದ್ದೇನೆ ಎಂದು ತಿಳಿಸಿದರು.
ಕಾಮಗಾರಿ ವಿಳಂಬ ಅಧಿಕಾರಿಗಳ ತರಾಟೆ ತಗೆದುಕೊಂಡ ಸಚಿವ ಭೋಸರಾಜು
7 ವರ್ಷಗಳ ಕಾಲ ಕಾಮಗಾರಿಯನ್ನು ಪೂರ್ಣಗೊಳಿಸದೇ ಇರುವ ಬಗ್ಗೆ ಅಧಿಕಾರಿಗಳನ್ನು ಸಚಿವರು ತರಾಟೆಗೆ ತಗೆದುಕೊಂಡರು. ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯ. ಆಯಾ ಕಾಲಕ್ಕೆ ಕಾಮಗಾರಿಗಳ ಪರಿಶೀಲನೆ ಮಾಡಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸೂಚನೆ ನೀಡಿದರು.
ಪರಿಶೀಲನೆಯ ಸಂಧರ್ಭದಲ್ಲಿ ಸಂಸದರಾದ ರಾಜಶೇಖರ್ ಹಿಟ್ನಾಳ್, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಗಳಾದ ರಾಘವನ್, ಇಲಾಖೆ ಉಪಕಾರ್ಯದರ್ಶಿ ವಿನಾಯಕ ಹರ್ನಟಗಿ, ನೀರಾವರಿ ಇಲಾಖೆ ಉತ್ತರ ವಲಯ ಮುಖ್ಯ ಅಭಿಯಂತರರಾದ ಜಗದೀಶ್ ರಾಥೋಡ್, ಕಾರ್ಯನಿರ್ವಾಹಕ ಅಭಿಯಂತರರಾದ ಬಿ. ಎಸ್ ಪಾಟೀಲ್ ಸೇರಿದಂತೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.