KOPPAL : ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಚಾಲನೆ!

You are currently viewing KOPPAL : ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಚಾಲನೆ!

ಕೊಪ್ಪಳ : ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ಲಸಿಕಾ ಅಭಿಯಾನ-2023 ಕಾರ್ಯಕ್ರಮಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ಚಾಲನೆ ನೀಡಿದರು.

ಕಾರಟಗಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಗಸ್ಟ್ 07ರಂದು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಸಚಿವರು ಹಾಜರಾಗಿ, ಮಗುವಿಗೆ ಲಸಿಕೆ ಹಾಕಿದರು. ಬಳಿಕ ಮಾತನಾಡಿದ ಅವರು, ಲಸಿಕೆಗಳಿಂದ ಮಾರಕ ರೋಗಗಳ ವಿರುದ್ಧ ಮಕ್ಕಳನ್ನು ರಕ್ಷಿಸಬಹುದು.

ಲಸಿಕೆಗಳು ಮಕ್ಕಳ ಉತ್ತಮ ಆರೋಗ್ಯಕ್ಕೆ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಅವರ ಬೆಳವಣಿಗೆಗೆ ಪೂರಕವಾಗಿದ್ದು, ಎಲ್ಲಾ ಅರ್ಹ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕೆಯನ್ನು ನೀಡಬೇಕು. ಲಸಿಕೆಯಿಂದ ವಂಚಿತರಾಗಿರುವ ಹಾಗೂ ಲಸಿಕೆಗೆ ಅರ್ಹರಿರುವ ಫಲಾನುಭವಿಗಳನ್ನು ಗುರುತಿಸಿ ಲಸಿಕೆ ನೀಡುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಆರೋಗ್ಯಾಧಿಕಾರಿಗಳು, ವೈದ್ಯರು ಕ್ರಮ ಕೈಗೊಳ್ಳಬೇಕು. ವೈದ್ಯಾಧಿಕಾರಿಗಳು ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡಲು ಶ್ರಮೀಸಿ ಎಂದು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಲಿಂಗರಾಜು ಟಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಅನೇಕ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳನ್ನು ಕಾಲಕಾಲಕ್ಕೆ ಪಡೆಯದೆ ವಂಚಿತರಾದ 0 ರಿಂದ 5 ವರ್ಷದೊಳಗಿನ ಮಕ್ಕಳನ್ನು ಹಾಗೂ ಗರ್ಭಿಣಿ ಸ್ತ್ರೀಯರನ್ನು ಗುರಿಯಾಗಿಸಿಕೊಂಡು ಅವರಿಗೆ ಬಿಟ್ಟುಹೋದ ಲಸಿಕೆಗಳನ್ನು ಪೂರ್ಣಗೊಳಿಸಲು ಭಾರತ ಸರ್ಕಾರವು ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ಲಸಿಕಾ ಅಭಿಯಾನವನ್ನು ಆಯೋಜಿಸಿದೆ.

ಈ ಅಭಿಯಾನದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾ ಪಟ್ಟಿಯ ಅನುಸಾರ ವಯಸ್ಸಿಗನುಗುಣವಾಗಿ ಲಸಿಕೆ ಪಡೆಯುವ, ಲಸಿಕೆ ವಂಚಿತರಾಗಿರುವ, ಬಿಟ್ಟುಹೋಗಿರುವ, ಅಪಾಯದಲ್ಲಿರುವ ಪ್ರದೇಶಗಳನ್ನು ಮತ್ತು ಸಮುದಾಯಗಳನ್ನು ಗುರುತಿಸಿ ಅವರಿಗೆ ಲಸಿಕೆ ನೀಡಬೇಕಾಗಿರುತ್ತದೆ. ವಿಶೇಷವಾಗಿ ದಢಾರ-ರುಬೆಲ್ಲಾ ಲಸಿಕಾಕರಣ, ಪಿಸಿಎ ಲಸಿಕಾಕರಣ ಮತ್ತು ಇತ್ತಿಚಿಗೆ 3ನೇ ಡೋಸ್ ಆಗಿ ಸೇರ್ಪಡೆಗೊಂಡ ಎಫ್‌ಐಪಿವಿ ಲಸಿಕೆಗಳ ಪ್ರಗತಿಯನ್ನು ಹೆಚ್ಚಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 2023ರ ಆಗಸ್ಟ್ 07ರಿಂದ 12ರವರೆಗೆ, ಸೆಪ್ಟೆಂಬರ್ 11ರಿಂದ 16ರವರೆಗೆ ಮತ್ತು ಅಕ್ಟೋಬರ್ 09ರಿಂದ 14ರ ವರೆಗೆ, ಈ ಅವಧಿಯ ನಿರ್ದಿಷ್ಟ 06 ದಿನಗಳಂದು ಮಿಷನ್ ಇಂದ್ರಧನುಷ್ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಮೊದಲ ಸುತ್ತಿನಲ್ಲಿ (ಆಗಸ್ಟ್ 07ರಿಂದ 12ರವರೆಗೆ) 1207 ಗರ್ಭಿಣಿಯರು, 0-2 ವರ್ಷ ಒಳಗಿನ 5099 ಮಕ್ಕಳು, 2-5 ವರ್ಷ ಒಳಗಿನ 510 ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮದಡಿಯಲ್ಲಿ ಈ ಗುರಿಯನ್ನು ತಲುಪಲು ಜಿಲ್ಲೆಯಾದ್ಯಂತ ಒಟ್ಟು 720 ಲಸಿಕಾ ಸತ್ರಗಳನ್ನು ಆಯೋಜಿಸಲಾಗುವುದು. 330 ಜನ ಆರೋಗ್ಯ ಕಾರ್ಯಕರ್ತಕರು ಹಾಗೂ 1269 ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕರ್ತವ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಪ್ರಕಾಶ, ನಿವೃತ್ತ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವೀರಣ್ಣ ಉಪ್ಪಳ, ಖಾಸಗಿ ತಜ್ಞ ವೈದ್ಯರಾದ ಡಾ.ಮುದಗಲ್, ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಶಕುಂತಲಾ ಪಾಟೀಲ್, ಶಿವರೆಡ್ಡಿ ವಕೀಲರು, ಭೂದಾನಿಗಳಾದ ಕೆ.ಸೂಗಪ್ಪ ಹಾಗೂ ಕೆ.ನಾಗಪ್ಪ ಸೇರಿದಂತೆ ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ಆರೋಗ್ಯ ಶಿಕ್ಷಣಾಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Leave a Reply

error: Content is protected !!