ಅಂದಾಜು ಬೆಳೆನಷ್ಟ ಸಮೀಕ್ಷೆಯನ್ನು ಕರಾರುವಕ್ಕಾಗಿ ನಡೆಸಿ: ಜಿಲ್ಲಾಧಿಕಾರಿ ನಲಿನ್ ನಿರ್ದೇಶನ!

You are currently viewing ಅಂದಾಜು ಬೆಳೆನಷ್ಟ ಸಮೀಕ್ಷೆಯನ್ನು ಕರಾರುವಕ್ಕಾಗಿ ನಡೆಸಿ: ಜಿಲ್ಲಾಧಿಕಾರಿ ನಲಿನ್ ನಿರ್ದೇಶನ!

ಕೊಪ್ಪಳ : ಕೊಪ್ಪಳ ಜಿಲ್ಲೆಯಾದ್ಯಂತ ಅಂದಾಜು ಬೆಳೆನಷ್ಟ ಸಮೀಕ್ಷೆಯು ಕರಾರುವಕ್ಕಾಗಿ ನಡೆಯಬೇಕು. ಈ ಹಿನ್ನೆಲೆಯಲ್ಲಿ ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣ ಪ್ರಕ್ರಿಯೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಹೇಳಿದರು.

2023-24ನೇ ಸಾಲಿನಲ್ಲಿ ಬರ ನಿರ್ವಹಣೆ ಕುರಿತಂತೆ ನಿಗದಿತ ತಾಲೂಕುಗಳಲ್ಲಿ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ (ಗ್ರೌಂಡ್ ಟ್ರೂಥಿಂಗ್) ಸಂಬಂಧ ಬೆಳೆ ಸಮೀಕ್ಷೆ ಕೈಗೊಳ್ಳುವ ಬಗ್ಗೆ ಹಾಗೂ ಈ ಆಡಳಿತ ಇಲಾಖೆಯಿಂದ ತಯಾರಿಸಲಾಗಿರುವ ಮೊಬೈಲ್ ಆ್ಯಪ್ ಮತ್ತು ವೆಬ್ ಅಪ್ಲಿಕೇಶನ್ ನಿರ್ವಹಣೆ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು ಆಗಸ್ಟ್ 25ರಂದು ನಡೆಸಿದ ವಿಡಿಯೋ ಸಂವಾದ ಸಭೆಯ ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ನೀಡಿದ ಸೂಚನೆಯಂತೆ ಜಿಲ್ಲೆಯಾದ್ಯಂತ ಎಲ್ಲಾ ಕಡೆಗಳಲ್ಲಿ ಅಂದಾಜು ಬೆಳೆಹಾನಿ ಸಮೀಕ್ಷೆಯನ್ನು ನಿಖರವಾಗಿ ನಡೆಸಲು ಮುತುವರ್ಜಿ ವಹಿಸಬೇಕು ಎಂದು ಅವರು ಕಂದಾಯ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು.

ಕಂದಾಯ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿ ತಿಳಿಸಿದ ಹಾಗೆ ಬರ ಪರಿಸ್ಥಿತಿ ಉದ್ಭವಿಸುವ ತಾಲೂಕುಗಳಲ್ಲಿ ಶೇ.10ರಷ್ಟು ಗ್ರಾಮಗಳನ್ನು ನಿಯಮಾನುಸಾರ ಗುರುತಿಸಬೇಕು. ಈ ಗ್ರಾಮಗಳಲ್ಲಿ ಬೆಳೆಯುವ ಪ್ರಮುಖ ಬೆಳೆಗಳನ್ನು ಹಾಗೂ ಪ್ರತಿ ಬೆಳೆಯ 5 ಸೈಟ್ಸನ್ನು ಗುರುತಿಸಬೇಕು. ಈ ಕ್ಷೇತ್ರ ಪರಿಶೀಲನೆ ºಗೂ ದೃಢೀಕರಣ (ಗ್ರೌಂಡ್ ಟ್ರೂಥಿಂಗ್)ವನ್ನು ಸ್ಮಾರ್ಟ್ಪೋನ್ ಆಧಾರಿತ ಅಪ್ಲಿಕೇಶನ್ ಬಳಸಿ ನಡೆಸಬೇಕು ಎನ್ನುವ ನಿಯಮ ಪಾಲನೆ ಮಾಡಬೇಕು. ಕೊಪ್ಪಳ ಜಿಲ್ಲೆಯಾದ್ಯಂತ ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣ ಪ್ರಕ್ರಿಯೆಯು ಅಚ್ಚುಕಟ್ಟಾಗಿ ನಡೆಸಲು ಆಯಾ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಮೇಲ್ವಿಚಾರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಈ ಆಡಳಿತ ಇಲಾಖೆಯಿಂದ ತರಬೇತಿ ಪಡೆದ ಮಾಸ್ಟರ್ ಟ್ರೇನರಗಳು ಈ ಪ್ರಕ್ರಿಯೆಯ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸರಿಯಾಗಿ ಮಾಹಿತಿ ನೀಡಬೇಕು. ಮಾಸ್ಟರ್ ಟ್ರೇನರಗಳಿಂದ ತರಬೇತಿ ಪಡೆದ ಸಮೀಕ್ಷಾ ತಂಡದವರು ಆಗಸ್ಟ್ 28ರಿಂದ ಆಗಸ್ಟ್ 31ರವರೆಗೆ ಕಾರ್ಯಕ್ಷೇತ್ರಕ್ಕೆ ತೆರಳಿ ಸಮೀಕ್ಷೆ ನಡೆಸಿದ ಬಗ್ಗೆ ವರದಿ ಮಾಡಬೇಕು. ಸಂಬAಧಿಸಿದ ಇಲಾಖೆಗಳಿಂದ ದೃಢೀಕರಿಸಲ್ಪಟ್ಟ ಮಾಹಿತಿಯನ್ನು ಪಡೆದು ಕ್ರೋಡಿಕರಿಸಿ ದೃಢೀಕೃತ ದಾಖಲಾತಿಗಳನ್ನು ಕಂದಾಯ ಇಲಾಖೆಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ತಹಸೀಲ್ದಾರಗಳಿಗೆ ಸೂಚನೆ: ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ (ಗ್ರೌಂಡ್ ಟ್ರೂಥಿಂಗ್) ಪ್ರಕ್ರಿಯೆಯು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಅಚ್ಚುಕಟ್ಟಾಗಿ ನಡೆಯುವಂತಾಗಬೇಕು. ಈ ಹಿನ್ನೆಲೆಯಲ್ಲಿ ತಾಲೂಕುವಾರು ಸಮೀಕ್ಷಾ ತಂಡಗಳನ್ನು ರಚಿಸಿ ತಂಡದ ಕಾರ್ಯವೈಖರಿಯ ಅವರಿಗೆ ಮನವರಿಕೆ ಮಾಡಲು ತಹಸೀಲ್ದಾರಗಳ ಹಂತದಲ್ಲಿ ಸಭೆಗಳನ್ನು ನಡೆಸಬೇಕು. ಮೊಬೈಲ್ ಆ್ಯಪ್ ಮತ್ತು ವೆಬ್ ಅಪ್ಲಿಕೇಶನ್ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಜೂನ್ 1ರಿಂದ ಆಗಸ್ಟ್ 24ರವರೆಗೆ ಗಂಗಾವತಿ ತಾಲೂಕಿನಲ್ಲಿ ವಾಡಿಕೆ ಮಳೆಯು 215 ಮಿಮಿ ಇದ್ದು ವಾಸ್ತವವಾಗಿ 172 ಮಿಮಿ ಸುರಿದು ಶೇ.20ರಷ್ಟು, ಕೊಪ್ಪಳ ತಾಲೂಕಿನಲ್ಲಿ ವಾಡಿಕೆ ಮಳೆ 238 ಮಿಮಿ ಇದ್ದು ವಾಸ್ತವವಾಗಿ 224 ಮಿಮಿ ಸುರಿದು ಶೇ.6ರಷ್ಟು, ಕುಷ್ಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 195 ಮಿಮಿ ಇದ್ದು ವಾಸ್ತವವಾಗಿ 106 ಮಿಮಿ ಸುರಿದು ಶೇ.46 ರಷ್ಟು, ಯಲಬುರ್ಗಾ ತಾಲೂಕಿನಲ್ಲಿ ವಾಡಿಕೆ ಮಳೆ 210 ಮಿಮಿ ಇದ್ದು ವಾಸ್ತವವಾಗಿ 169 ಮಿಮಿ ಸುರಿದು ಶೇ.20ರಷ್ಟು, ಕಾರಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 197 ಮಿಮಿ ಇದ್ದು ವಾಸ್ತವವಾಗಿ 138 ಮಿಮಿ ಸುರಿದು ಶೇ.30ರಷ್ಟು, ಕುಕನೂರ ತಾಲೂಕಿನಲ್ಲಿ ವಾಡಿಕೆ ಮಳೆ 223 ಮಿಮಿ ಇದ್ದು ವಾಸ್ತವವಾಗಿ 192 ಮಿಮಿ ಸುರಿದು ಶೇ.14ರಷ್ಟು, ಕನಕಗಿರಿ ತಾಲೂಕಿನಲ್ಲಿ ವಾಡಿಕೆ ಮಳೆ 178 ಮಿಮಿ ಇದ್ದು ವಾಸ್ತವವಾಗಿ 136 ಮಿಮಿ ಸುರಿದು ಶೇ.23ರಷ್ಟು ಅದೇ ರೀತಿ ಜಿಲ್ಲಾದ್ಯಂತ ವಾಡಿಕೆ ಮಳೆ 212 ಮಿಮಿ ಇದ್ದು ವಾಸ್ತವವಾಗಿ 165 ಮಿಮಿ ಸುರಿದು ಶೇ.22ರಷ್ಟು ಮಳೆ ಕೊರತೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್.ಅವರು ಸಭೆಗೆ ತಿಳಿಸಿದರು.

2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕುಕನೂರ, ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕುಗಳಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ 3,08,000 ಹೆಕ್ಟೇರ್ ಕ್ಷೇತ್ರದ ಪೈಕಿ 2,83,287 ಹೆಕ್ಟೇರ್ ಕ್ಷೇತ್ರದ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆಗಸ್ಟ್ 18ರವರೆಗೆ 50,364 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 1,15,315 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 56,148 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ, 19,905 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 8635 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 13,120 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಇದೆ ರೀತಿ ಇನ್ನೀತರ ಬೆಳೆಗಳನ್ನು ಸಹ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಡಳಿತ ಭವನದ ಕೇಶ್ವಾನ್ ಹಾಲ್‌ನಲ್ಲಿ ನಡೆದ ಈ ಸಭೆಯಲ್ಲಿ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ಕೊಪ್ಪಳ ತಹಸೀಲ್ದಾರ ವಿಠ್ಠಲ್ ಚೌಗಲಾ ಸೇರಿದಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Leave a Reply

error: Content is protected !!