ಬೆಂಗಳೂರು : ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಚಾಲೆಜಿಂಗ್ ಸ್ಟಾರ್ ನಟ ದರ್ಶನ್ ಇದೀಗ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ತಮಗೆ ಊಟ, ಹಾಸಿಗೆ, ಪುಸ್ತಕಗಳನ್ನು ಮನೆಯಿಂದ ಪಡೆಯಲು ಅನುಮತಿ ಕೋರಿ ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ನಟ ದರ್ಶನ್ ಅವರು ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಕೊಲೆ ಆರೋಪದ ಮೇಲೆ ಸದ್ಯ ಜೈಲಿನಲ್ಲಿರುವ ನಟ ದರ್ಶನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಶಗಿದೆ. ಕಾರಣಕ್ಕೆ ಅವರು ಜೈಲಿನ ಆಹಾರವನ್ನು ಸೇವನೆ ಮಾಡಿದರೆ, ಅಜೀರ್ಣ ಮತ್ತು ವಾಂತಿಯಾಗುತ್ತಿದೆ. ಇದಲ್ಲದೇ ಜೈಲಿನ ವೈದ್ಯರು ಕೂಡ ಇದನ್ನೇ ಉಲ್ಲೇಖ ಮಾಡಿದ್ದು, ಇದನ್ನೆ ಆಧಾರವಾಗಿ ಇಟ್ಟುಕೊಂಡು ದರ್ಶನ್ ಪರ ವಕೀಲರು ರಿಟ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಅರ್ಜಿ ವಿಚಾರಣೆ ನಾಳೆ ನ್ಯಾಯಾಧೀಶರ ಮುಂದೆ ಬರಲಿದೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳು ಜೈಲುಪಾಲಾಗಿದ್ದು, ಪೊಲೀಸರು ಈ ಪ್ರಕರಣಕ್ಕೆ ಅಂತ್ಯ ಹಾಡಲೆಂದೆ, ಈ ಸಂಬಂಧ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ. ಈ ನಡುವೆ ನಟ ದರ್ಶನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿರುವುದು ಭಾರೀ ಕೂತುಹಲ ಮೂಡಿಸಿದೆ.