ಕುಕನೂರು : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ಅಳಿಯಪ್ಪನಮಠದ ಶ್ರೀ ಅಳಿಯ ಚನ್ನ ಬಸವೇಶ್ವರ ದೇವರ ಅದ್ದೂರಿ ಉಚ್ಚಾಯ ಮಂಗಳವಾರ ಜರುಗಿತು.
ಯಲಬುರ್ಗಾ ಶ್ರೀ ಧರ ಮುರಡಿ ಮಠದ ಬಸವಲಿಂಗೇಶ್ವರ ಸ್ವಾಮೀಜಿ, ಕುಕನೂರು ಅನ್ನದಾನಿಶ್ವರ ಮಠದ ಮಹಾದೇವ ಸ್ವಾಮೀಜಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
ಸುಮಾರು ಐದುನೂರು ವರ್ಷಗಳ ಐತಿಹಾಸಿಕ ದೇವಸ್ಥಾನವಾಗಿರುವ ಕಕ್ಕಿಹಳ್ಳಿ ಗ್ರಾಮದ ಶ್ರೀ ಅಳಿಯ ಚನ್ನ ಬಸವೇಶ್ವರ ದೇವರ ಜಾತ್ರೆಯು ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ಮಂಗಳವಾರ ದಿನದಂದು ನಡೆಯುತ್ತದೆ.
ಉತ್ಸವದಲ್ಲಿ ಪಲ್ಲಕ್ಕಿ ಮೆರವಣಿಗೆ, ಗುದ್ನೇಶ್ವರ ಮಠ, ಕೋನಾಪುರ ಗ್ರಾಮದ ಭಜನಾ ಮೇಳ, ಡೊಳ್ಳು ಸೇರಿದಂತೆ ಸಲಕ ಮಂಗಳ ವಾದ್ಯಮೇಳದೊಂದಿಗೆ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಿತು. ಸುತ್ತ ಮುತ್ತಲ ಗ್ರಾಮಸ್ಥರು ಜಾತ್ರೆಯಲ್ಲಿ ಭಾಗವಹಿಸಿದರು. ನಂತರ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪ್ರಸಾದ ಸೇವಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಇಲ್ಲಿ ಅಜ್ಜನ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ ನಡೆಯುತ್ತದೆ. ಅನ್ಯ ತಾಲೂಕು,ಜಿಲ್ಲೆಗಳಿಂದ ನೂರಾರು ಭಕ್ತರು ಆಗಮಿಸಿ ಅಳಿಯ ಚನ್ನ ಬಸವೇಶ್ವರ ಸ್ವಾಮಿಯ ದರ್ಶನ ಪಡೆಯುವುದು ವಾಡಿಕೆಯಾಗಿದೆ.