FLASH NEWS : ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕಠಿಣ ಷರತ್ತುಗಳ ಸಡಿಲಿಸಲು ಕೆಯುಡಬ್ಲೂಜೆ ಆಗ್ರಹ..!
ಬೆಂಗಳೂರು : ಗ್ರಾಮೀಣ ಪತ್ರಕರ್ತರಿಗೆ ಉಚಿತವಾಗಿ ಬಸ್ ಪಾಸ್ ನೀಡಲು ಹಾಕಿರುವ ಕೆಲ ಕಠಿಣ ಷರತ್ತುಗಳನ್ನು ಸಡಿಲಿಸಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಒತ್ತಾಯಿಸಿದ್ದಾರೆ.
ಮೂರು ದಶಕಗಳ ಕೆಯುಡಬ್ಲೂಜೆ ಬೇಡಿಕೆಗೆ ಮನ್ನಣೆ ನೀಡಿ, ಬಸ್ ಪಾಸ್ ಜಾರಿ ನೀಡಿದ್ದನ್ನು ಸ್ವಾಗತಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ನುಡಿದಂತೆ ನಡೆದುಕೊಂಡಿರುವುದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದ್ದಾರೆ.
ತಾಲೂಕು ಮತ್ತು ಹೋಬಳಿ ಹಂತದಲ್ಲಿ ಕೆಲಸ ಮಾಡುವ ಗ್ರಾಮೀಣ ಪತ್ರಕರ್ತರಿಗೆ ಯಾವ ಮಾಧ್ಯಮ ಸಂಸ್ಥೆಗಳು ಪೂರ್ಣಾವಧಿ ನೇಮಕಾತಿ ಪತ್ರ ನೀಡುವುದಿಲ್ಲ. ಆದ್ದರಿಂದ ಈ ವಿಷಯ ಗಂಭೀರವಾಗಿ ಪರಿಗಣಿಸಿ, ಪೂರ್ಣಾವಧಿ ನೇಮಕ ಎನ್ನುವುದನ್ನು ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.
ಮಾನ್ಯತೆ ಪಡೆದ ಪತ್ರಿಕೆಯಲ್ಲಿ ಕೆಲಸ ಮಾಡುವ ಎಲ್ಲ ಪತ್ರಕರ್ತರನ್ನು ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು. ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ತಾಲೂಕು ಮಟ್ಟದಲ್ಲಿ ವರದಿಗಾರರಾಗಿರುವ ಎಲ್ಲಾ ಪತ್ರಕರ್ತರಿಗೂ ಬಸ್ ಪಾಸ್ ನೀಡಬೇಕು. ಹೋಬಳಿ ಹಂತದಲ್ಲಿಯೂ ಹಲವು ಪತ್ರಿಕೆಗಳಿಗೆ ವರದಿಗಾರರಿರುವ ಕಾರಣ ಈ ಸೌಲಭ್ಯ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿಯೇ ಬಸ್ ಪಾಸ್‌ಗಾಗಿ ಅರ್ಹ ಪತ್ರಕರ್ತರ ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಕೆಯುಡಬ್ಲೂಜೆ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಹಿರಿಯ ಪತ್ರಕರ್ತರೊಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಶಿವಾನಂದ ತಗಡೂರು ಅವರು ಮನವಿ ಮಾಡಿದ್ದಾರೆ.