ಇವಿಎಂ, ವಿವಿ ಪ್ಯಾಟ್ ಬಳಕೆ ಕುರಿತು ಮಾಹಿತಿ ನೀಡಿದ ಜಿಪಂ ಸಿಇಒ

You are currently viewing ಇವಿಎಂ, ವಿವಿ ಪ್ಯಾಟ್ ಬಳಕೆ ಕುರಿತು ಮಾಹಿತಿ ನೀಡಿದ ಜಿಪಂ ಸಿಇಒ

ಕೊಪ್ಪಳ: ಏಪ್ರಿಲ್ 06 : ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿಯು ಜಿಲ್ಲೆಯಾದ್ಯಂತ ಹಲವು ವೈವಿಧ್ಯಮಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇವಿಎಂ ಹಾಗೂ ವಿವಿ ಪ್ಯಾಟ್ ಬಳಕೆ ಬಗ್ಗೆ ವಿಶೇಷವಾಗಿ ಯುವ ಮತದಾರರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಏಪ್ರೀಲ್ 6ರಂದು ಕೊಪ್ಪಳದ ಕಿಮ್ಸ್ ಕಾಲೇಜಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಇವಿಎಂ ಹಾಗೂ ವಿವಿ ಪ್ಯಾಟ್ ಬಳಕೆ ಕುರಿತಂತೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳ ಪ್ರತಿನಿಧಿಗಳನ್ನು ಆರಿಸಿ ಕಳುಹಿಸುವ ಮಹತ್ತರ ಜವಾಬ್ದಾರಿ ಈ ದೇಶದ ಪ್ರತಿಯೊಬ್ಬ ಮತದಾರನ ಮೇಲಿದ್ದು, ಈ ಜವಾಬ್ದಾರಿಯ ಮಹತ್ವ ಅರಿತು ಎಲ್ಲ ಮತದಾರರು ತಪ್ಪದೆ ತಮ್ಮ ಮತ ಚಲಾಯಿಸಬೇಕು. ಮತದಾನ ಮಾಡುವುದರ ಮೂಲಕ ಎಲ್ಲರೂ ತಮ್ಮ-ತಮ್ಮ ಆದ್ಯ ಕರ್ತವ್ಯ ಪಾಲಿಸಬೇಕು ಎಂದು ಸಲಹೆ ನೀಡಿದರು.

ಅಣುಕು ಮತದಾನ:
ಮೊದಲನೇ ಬಾರಿಗೆ ಮತ ಚಲಾವಣೆ ಮಾಡಿದ ಹೊಸ ಮತದಾರರು ಇವಿಎಂ ಹಾಗೂ ವಿವಿಪ್ಯಾಟ್ ಕಾರ್ಯ ಚಟುವಟಿಕೆ ಕುರಿತು ಉತ್ಸಾಹದಿಂದ ತಿಳಿದು ಅಣಕು ಮತದಾನ ಮಾಡಿದರು. ಮತದಾನಕ್ಕೆ ಯುವ ಮತದಾರರನ್ನು ಆಕರ್ಷಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಸಿದ್ಧಪಡಿಲಾದ ಫೋಟೋ ಫ್ರೇಮ್‌ನಲ್ಲಿ ವಿದ್ಯಾರ್ಥಿಗಳು ಫೋಟೋ ತೆಗೆಯಿಸಿಕೊಂಡು ಸಂತಸ ವ್ಯಕ್ತಪಡಿಸಿದರು. ಜಾಗೃತಿ ಫಲಕಗಳನ್ನು ಹಿಡಿದು ಮತದಾನ ಜಾಗೃತಿಗೆ ಸಹಕರಿಸಿದರು.
ಪ್ರತಿಜ್ಞಾ ವಿಧಿ ಸ್ವೀಕಾರ: ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪ್ರತಿಜ್ಞಾವಿದಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಕಿಮ್ಸ್ ನಿರ್ದೇಶಕರಾದ ಡಾ.ವೈಜನಾಥ ಇಟಗಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಟಿ ಕೃಷ್ಣಮೂರ್ತಿ ಸೇರಿದಂತೆ, ಕಿಮ್ಸ್ ಪ್ರಾಶುಂಪಾಲರು, ಬೋಧಕರು, ಜಿಲ್ಲಾ ಸ್ವೀಪ್ ಸಮಿತಿ ಅಧಿಕಾರಿ, ಸಿಬ್ಬಂದಿ ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

error: Content is protected !!