Post Views: 33
ಮಕ್ಕಳು ವಿದ್ಯಾವಂತರಾದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಹೆಚ್.ಆರ್.ಗವಿಯಪ್ಪ ಸಲಹೆ
ಹೊಸಪೇಟೆ (ವಿಜಯನಗರ) : ಯಾವುದೇ ಸಮಾಜವು ಪ್ರಗತಿಯಾಗಬೇಕಾದರೆ ಆ ಸಮಾಜದ ಮಕ್ಕಳು ವಿದ್ಯಾವಂತರಾಗಬೇಕು. ಈ ನಿಟ್ಟಿನಲ್ಲಿ ಯೋಚಿಸಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡುವುದು ಪಾಲಕರಾದ ನಮ್ಮ ಜವಾಬ್ದಾರಿಯಾಗಿದೆ ಎಂದು ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೊಸಪೇಟೆ ನಗರಸಭೆ ವತಿಯಿಂದ ಆಗಸ್ಟ್ 28ರಂದು ಜಿಲ್ಲಾಧಿಕಾರಿಗಳ ಕಚೇರಿಯ ಆಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಹಿಂದುಳಿದ ವರ್ಗಗಳ ಹಾಗೂ ದಲಿತರ ಏಳಿಗೆಗೆ ಶ್ರಮಿಸಿದರು. ಬಸವಣ್ಣನವರಂತೆ ಸಮಾಜ ಬದಲಾವಣೆಯ ಆಶಯ ಹೊಂದಿದ್ದರು. ಜನಮುಖಿ ಸಿದ್ಧಾಂತಕ್ಕೆ ಬದ್ಧರಾಗಿ ಅವರು ಕೆಲಸ ಮಾಡಿದರು ಎಂದು ತಿಳಿಸಿದರು.
ನಮ್ಮ ಸಮಾಜದಲ್ಲಿ ಕಡಿಮೆ ಜನಸಂಖ್ಯೆಯ ಸಮುದಾಯಗಳು ಸಾಕಷ್ಟಿವೆ. ಇವುಗಳ ಅಭಿವೃದ್ಧಿಗೆಂದೇ ಸರ್ಕಾರವು ಹಲವಾರು ನಿಗಮಗಳನ್ನು ರಚಿಸಿ ಅನುದಾನ ಮೀಸಲಿರಿಸಿ ಅಂತಹ ಸಮುದಾಯಗಳ ಏಳ್ಗೆಗೆ ಶ್ರಮಿಸಲಾಗುತ್ತಿದೆ. ಆಯಾ ನಿಗಮಗಳಲ್ಲಿ ಇರುವ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ವಿವಿಧ ಯೋಜನೆಗಳ ಸದುಪಯೋಗ ಪಡೆದು ಸಣ್ಣ ಸಣ್ಣ ಸಮುದಾಯದ ಜನರು ಮುಂದೆ ಬರಬೇಕು ಎಂದು ಶಾಸಕರು ಸಲಹೆ ಮಾಡಿದರು.
ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಮಾತನಾಡಿ, ಸರಕಾರವು ಹಲವಾರು ಜಯಂತಿಗಳನ್ನು ಆಚರಣೆ ಮಾಡುತ್ತಿದೆ. ಈ ಮೂಲಕ ಮಹಾತ್ಮರ ಆಶಯಗಳು, ಸಿದ್ಧಾಂತ ಹಾಗೂ ಅವರ ಸಮಾಜಮುಖಿ ಕಾರ್ಯಗಳನ್ನು ಜನತೆಗೆ ತಿಳಿಸುವ ಕಾರ್ಯವಾಗುತ್ತಿದೆ ಎಂದರು. ಬ್ರಹ್ಮಶ್ರೀ ನಾರಾಯಣ ಗುರು ಅವರ ಕಾರ್ಯಗಳು ಸದಾಕಾಲ ಸ್ಮರಣೀಯವಾಗಿವೆ. ಅಸ್ಪೃ್ಪಶ್ಯತೆಯ ಆಚರಣೆ ತಡೆಯುವ ಮಹತ್ವದ ಕಾರ್ಯ ಮಾಡಿದರು. ಜನರಲ್ಲಿ ದೇಶಭಕ್ತಿಯ ಭಾವವನ್ನು ಬೆಳೆಸಿದರು ಎಂದು ತಿಳಿಸಿದರು.
ಪ್ರತಿಭಾ ಪುಸ್ಕಾರ ಪ್ರದಾನ: 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಈಡಿಗ ಸಮಾಜದ ವಿದ್ಯಾರ್ಥಿಗಳಾದ ಹರಪನಹಳ್ಳಿ ತಾಲೂಕಿನ ಇ.ವಿ.ಅಜಯ್‌ಕುಮಾರ, ಇ.ವಿ.ಐಶ್ವರ್ಯ, ಇ.ಟಿ.ಅರವಿಂದ, ಹೂವಿನಹಡಗಲಿ ತಾಲೂಕಿನ ಅನುಷ್ ಈಡಿಗರ, ಈಡಿಗರ ಅಭಿಷೇಕ, ಇ.ಸಂಜನ, ಕೂಡ್ಲಿಗಿ ತಾಲೂಕಿನ ಆಶಾ, ಇ.ಜಿ.ಸುಪ್ರಿಯಾ, ಇ.ಪುಷ್ಪವತಿ, ಹೊಸಪೇಟೆ ತಾಲೂಕಿನ ಇ.ಹರ್ಷಿತ, ಇ.ಹರಿಪ್ರಸಾದ್ ಮತ್ತು ಇ.ಆಯುಶ್ ಅವರಿಗೆ ಇದೆ ವೇಳೆ ಸನ್ಮಾನಿಸಿ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಈಡಿಗ ಸಮಾಜದ ಅಧ್ಯಕ್ಷರಾದ ಚಂದ್ರಣ್ಣ, ಉಪಾಧ್ಯಕ್ಷರು, ಸದಸ್ಯರು ಹಾಗೂ ಇನ್ನೀತರರು ಉಪಸ್ಥಿತರಿದ್ದರು.