ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಬೆಂಬಲಿಸುವುದಾಗಿ ನಿರ್ಧಾರ ಪ್ರಕಟಿಸಿದ ನಟ ಕಿಚ್ಚ ಸುದೀಪ ಅವರ ಅನಿರೀಕ್ಷಿತ ನಡೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇದಕ್ಕೂ ಮುನ್ನ ಸುದೀಪ ಬಿಜೆಪಿ ಸೇರುತ್ತಾರೆ ಎಂದೇ ಸುದ್ದಿಯಾಗಿತ್ತು. ಆದರೆ ಪತ್ರಿಕಾಗೋಷ್ಠಿಯಲ್ಲಿ ಸುದೀಪ ತಮ್ಮ ಜಾಣ್ಮೆಯಿಂದ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದರು. ಅಭಿಮಾನಿಗಳಿಗೆ ನುಂಗಲೂ ಆಗದೆ ಉಗುಳಲೂ ಆಗದ ಪರಿಸ್ಥಿತಿ ತಂದಿಟ್ಟರು.
ಬಿಜೆಪಿ ಸೇರಲ್ಲ, ಆದರೆ ಮಾಮ ಬೊಮ್ಮಾಯಿ ಅವರನ್ನು ಬೆಂಬಲಿಸುತ್ತೇನೆ ಎಂದಿರುವ ಸುದೀಪ, ಮುಂಬರುವ ಚುನಾವಣೆಗೆ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಕಾಣಿಸಿಕೊಳ್ಳಲಿದ್ದಾರೆ. ವಾಸ್ತವದಲ್ಲಿ ಬಿಜೆಪಿಗೆ ಬೇಕಿರುವುದೂ ಅಷ್ಟೇ. ಅವರಿಗೆ ಸುದೀಪ ಪಕ್ಷಕ್ಕೆ ಬಂದು ಏನೂ ಮಾಡಬೇಕಿಲ್ಲ. ಆದರೆ ಅದಃಪತನ ಹಾದಿ ಹಿಡಿದಿರುವ ರಾಜ್ಯ ಬಿಜೆಪಿಗೆ ಜನರ ಮುಂದೆ ಬರಲು ಒಂದು ಮುಖ ಬೇಕಾಗಿತ್ತು. ಅದಕ್ಕೆ ಕೊನೆಯ ಆಯ್ಕೆಯಾಗಿ ಸುದೀಪ ಅವರ ಹಿಂದೆ ಬಿದ್ದಿರುವುದು ಸ್ಪಷ್ಟವಾಗುತ್ತದೆ. ಒಂದು ವೇಳೆ ಸುದೀಪ ಅಲ್ಲದೇ ಹೋಗಿದ್ದರೆ ದರ್ಶನ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರೇನೊ.
ಸುದೀಪ ಹೀಗೊಂದು ನಿರ್ಧಾರ ತಳೆಯಬಹುದು ಎಂದು ಯಾರೂ ಊಹಿಸಿರಲಿಲ್ಲ. ಬಿಜೆಪಿಯ ಸದ್ಯದ ‘ಇಮೇಜ್’ಗೂ, ಸುದೀಪ ಅವರಿಗಿರುವ ‘ಇಮೇಜ್’ ಗೂ ಬಹಳಷ್ಟು ವ್ಯತ್ಯಾಸ ಇರುವುದಷ್ಟೇ ಅಲ್ಲ, ತಾಳೆಯೇ ಆಗುವುದಿಲ್ಲ. ಅಂಥದ್ದರಲ್ಲಿ ಏಕಾಏಕಿ ಬಿಜೆಪಿ ಪರವಾಗಿ ನಿಲ್ಲುತ್ತಾರೆ ಎಂದರೆ ಅವರ ಬುದ್ಧಿಗೆ ಏನಾಗಿದೆ ಎಂದು ಜನ ಚಿಂತಿಸುವುದರಲ್ಲಿ ತಪ್ಪೇನೂ ಇಲ್ಲ.
ದಕ್ಷಿಣ ಭಾರತದ ಪ್ರಭಾವಿ ಹಾಗೂ ಪ್ರತಿಭಾವಂತ ನಟರಲ್ಲಿ ಸುದೀಪಕೂಡ ಒಬ್ಬರು. ದಕ್ಷಿಣ ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರು, ಸಿನಿಮಾರಂಗದ ನಡುವೆಯೇ ರಾಜಕೀಯ ವಲಯದಲ್ಲಿ ಕಾಣಿಸಿಕೊಳ್ಳುವ ಅಗತ್ಯವಿತ್ತೇ? ಯಾವುದೇ ಒತ್ತಡಕ್ಕೆ ಮಣಿದಿಲ್ಲ ಎನ್ನುವ ಸುದೀಪ, ತಾವು ಬೊಮ್ಮಾಯಿ ಬೆಂಬಲಿಸಲು ನೀಡಿದ ಕಾರಣವೇನೂ ಬಲವಾದದ್ದಲ್ಲ. ತೆರೆಮರೆಯಲ್ಲಿ ಏನು ನಡೆದಿದೆ ಎಂಬುದೂ ಸದ್ಯ ಯಾರಿಗೂ ಗೊತ್ತಿಲ್ಲ. ಆದರೆ ಸಿನಿಮಾ ನಟರನ್ನು ಸೆಳೆಯುವ ತಂತ್ರ ಕೇವಲ ರಾಜ್ಯ ಬಿಜೆಪಿಯ ಸ್ವತಂತ್ರ ನಿರ್ಧಾರ ಅಲ್ಲ, ಇದು ಹೈಕಮಾಂಡ್ ಮಟ್ಟದಲ್ಲಿ ಆಗಿರುವ ನಿರ್ಧಾರ ಎನ್ನುವುದಕ್ಕೆ ಒಂದಿಷ್ಟು ಹಿನ್ನೆಲೆಯನ್ನೂ ಗಮನಿಸಬಹುದು.
ಕೇರಳದಲ್ಲಿ ಬಿಜೆಪಿ ಎಂದಿಗೂ ತಲೆ ಎತ್ತುವುದಿಲ್ಲ ಎಂಬುದು ಖಚಿತ ಎನ್ನುವಷ್ಟು ಪ್ರಬಲವಾಗಿ ಅಲ್ಲಿ ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ ಪಕ್ಷಗಳು ನೆಲೆಯೂರಿವೆ. ಅಲ್ಲಿನ ಜನರೂ ಬಿಜೆಪಿಯನ್ನು ಇದುವರೆಗೆ ಸೋಕಲು ಬಿಟ್ಟಿಲ್ಲ. 2019ರ ಚುನಾವಣೆಯಲ್ಲಿ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ಬಿಜೆಪಿಯಿಂದ ಚುನಾವಣೆಗೆ ನಿಲ್ಲಿಸುವ ತಂತ್ರಗಳು ನಡೆದಿತ್ತು. ಈಗಾಗಲೇ ಇನ್ನೊಬ್ಬ ಪ್ರಸಿದ್ಧ ನಟ ಸುರೇಶ್ ಗೋಪಿ ಬಿಜೆಪಿ ಸೇರಿಯಾಗಿದೆ. ಆದರೆ ಮೋಹನ್ ಲಾಲ್ ಅವರಂತಹ ಲೆಜೆಂಡ್ ಮುಖ ಬಿಜೆಪಿಗೆ ಬೇಕಿತ್ತು. ಅವರನ್ನು ಸೆಳೆಯಲು ತಂತ್ರ ಮಾಡಲಾಯಿತು.
ಇತ್ತೀಚೆಗಷ್ಟೇ ತೆಲುಗಿನ ಜ್ಯೂನಿಯರ್ ಎನ್ ಟಿ ಆರ್ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ. ಕರ್ನಾಟಕದಲ್ಲಿ ರಾಕಿಂಗ್ ಸ್ಟಾರ್ ಯಶ್, ರಿಷಭ್ ಶೆಟ್ಟಿ ಮುಂತಾದ ಪ್ರಭಾವಿ ನಟರನ್ನೂ ಭೇಟಿಯಾಗಿದ್ದಾರೆ. ಸಿನಿಮಾರಂಗವನ್ನು ಪ್ರಚಾರಕ್ಕೆ ವ್ಯಾಪಕವಾಗಿ ಬಳಸುವ ತಂತ್ರ ಬಿಜೆಪಿ ಹೊಂದಿದೆ. ಹಾಗಾಗಿ ಸುದೀಪ ಅವರನ್ನು ಸ್ಟಾರ್ ಪ್ರಚಾರಕರಾಗಿ ಕರೆತರುವಲ್ಲಿ ಕೇಂದ್ರದ ಕಸರತ್ತು ನಡೆದಿರುವ ಸಾಧ್ಯತೆಯೇ ಹೆಚ್ಚು. ಎಲ್ಲಕ್ಕಿಂತ ಹೆಚ್ಚಾಗಿ ಸುದೀಪ ರಾಜ್ಯ ಬಿಜೆಪಿ ನಾಯಕರ ಮಾತಿಗೆ ಸೊಪ್ಪು ಹಾಕುವಷ್ಟು ಸುಲಭದ ನಟ ಅಲ್ಲ. ಅವರ ವರ್ಚಸ್ಸಿಗೆ ಅದು ಸರಿ ಅನಿಸುವುದೂ ಇಲ್ಲ.
ಸುದೀಪ ತಮ್ಮ ನಟನೆ, ಜೀವನಶೈಲಿ, ತಮ್ಮದೇ ಆದ ವರ್ಚಸ್ಸಿನ ಮೂಲಕ ಜನರ ಮನಸ್ಸಿನಲ್ಲಿ ಸ್ಥಾನ ಪಡೆದವರು. ಈಗ ರಾಜಕೀಯ ವಲಯಕ್ಕೆ ಒಂದು ಕಾಲು ಇಟ್ಟ ಮೇಲೆ ಈ ನಡೆ ಅವರ ಬದುಕಿನ ಮೇಲೆ ಅಥವಾ ರಾಜ್ಯ ರಾಜಕಾರಣದ ಮೇಲೆ ಯಾವ ಪರಿಣಾಮ ಬೀರುತ್ತದೆ, ಬಿಜೆಪಿಗೆ ಯಾವ ಬಗೆಯ ಲಾಭ ಆಗಲಿದೆ ಎಂಬುದು ಹೇಳಲಾಗದು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ ವಿರುದ್ಧ ವ್ಯಾಪಕ ಟ್ರೋಲ್ ನಡೆಯುತ್ತಿದೆ.
ಮೋಹನ್ ಲಾಲ್ ಚುನಾವಣೆಗೆ ನಿಲ್ಲುತ್ತಾರೆ, ಅದೂ ಕೂಡ ಬಿಜೆಪಿಯಿಂದ ಎಂದು ಸುದ್ದಿ ಹರಡಿದ್ದೇ ತಡ, ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಿಯವರೆಗೆ ಎಂದರೆ ಮೋಹನ್ ಲಾಲ್ ಫ್ಯಾನ್ಸ್ ಅಸೋಸಿಯೇಷನ್ ಸ್ವತಃ ಲಾಲ್ ಸಿನಿಮಾಗಳನ್ನು ಬಾಯ್ಕಾಟ್ ಮಾಡುವುದಾಗಿ ಎಚ್ಚರಿಕೆ ನೀಡಿತು. ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. ಅಭಿಮಾನಿಗಳ, ಅಭಿಮಾನದ ಒತ್ತಡಕ್ಕೆ ಮಣಿದ ಮೋಹನ್ ಲಾಲ್, ‘ನಾನು ರಾಜಕೀಯಕ್ಕೆ ಬರುವ ಪ್ರಶ್ನೆ ಇಲ್ಲ. ನನಗೆ ರಾಜಕೀಯದ ಬಗ್ಗೆ ಅಷ್ಟೇನೂ ಗೊತ್ತಿಲ್ಲ. ನಾನೊಬ್ಬ ನಟ. ಸಿನಿಮಾರಂಗದಲ್ಲಿಯೇ ಇರುತ್ತೇನೆ’ ಎಂದು ಹೇಳಿಕೆ ಕೊಟ್ಟರು. ಜನರ ಪ್ರಜ್ಞೆ ಎಂಬುದು ಎಚ್ಚರದ ಕಣ್ಣಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕು. ಪ್ರೀತಿ ಕೊಟ್ಟವರು ಅಭಿಮಾನಿಗಳು. ತಮ್ಮ ನಟನನ್ನು ನಟನಾಗಿಯೇ ನೋಡಲು ಇಚ್ಛಿಸಿದರು. ಒಂದು ವೇಳೆ ಮೋಹನ್ ಲಾಲ್ ಚುನಾವಣೆಗೆ ನಿಂತಿದ್ದರೆ, ಈಗ ಮಲಯಾಳಂ ಚಿತ್ರರಂಗದಲ್ಲಿ ಹೇಳಹೆಸರಿಲ್ಲದ ಹಂತಕ್ಕೆ ಬರುತ್ತಿದ್ದರು ಎಂಬುದು ವಾಸ್ತವ.
ಕರ್ನಾಟಕದಲ್ಲಿ ರಾಜಕೀಯದ ಯಾವ ಆಮಿಷಗಳಿಗೂ ಒಳಗಾಗದೆ ಸಿನಿಮಾರಂಗದಲ್ಲಿ ಭದ್ರವಾಗಿ ನಿಂತುಕೊಂಡ ಆದರ್ಶ ಪರಂಪರೆ ಡಾ.ರಾಜ್ ಕುಟುಂಬದ್ದು. ರಾಜ್ ಕುಮಾರ್ ಅವರಿಗೆ ಎಷ್ಟೇ ಆಹ್ವಾನ ಬಂದರೂ ಅವರು ಅದನ್ನು ನಿರಾಕರಿಸಿದರು. ಅವರ ಮಕ್ಕಳೂ ಅದೇ ಹಾದಿ ಹಿಡಿದರು. ಜನರ ಪ್ರೀತಿ ಅಭಿಮಾನ ಇರುವಾಗ ರಾಜಕೀಯ ಏಕೆ ಬೇಕು ಎಂದು ಕೇಳಿದರು ಪುನೀತ್. ನಟ ಶಿವರಾಜ್ ಕುಮಾರ್ ಪತ್ನಿ ಚುನಾವಣೆಗೆ ಸ್ಪರ್ಧಿಸಿದರೂ ಅವರ ಕುಟುಂಬದವರು ಯಾರೂ ಪ್ರಚಾರಕ್ಕೆ ಹೋಗುವುದಾಗಲಿ, ರಾಜಕೀಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದಾಗಲಿ ಮಾಡಿಲ್ಲ. ಒಂದು ವೇಳೆ ಡಾ. ರಾಜ್ ರಾಜಕೀಯಕ್ಕೆ ಕಾಲಿಟ್ಟಿದ್ದರೆ ನಿಸ್ಸಂಶಯವಾಗಿ ರಾಜ್ಯದ ಮುಖ್ಯಮಂತ್ರಿಯೇ ಆಗಿಬಿಡುತ್ತಿದ್ದರು. ಅವರ ಮಕ್ಕಳೂ ಆ ಪರಂಪರೆಯಲ್ಲಿಯೇ ಮುಂದುವರಿಯುತ್ತಿದ್ದರು. ಬೇಕಾದಷ್ಟು ಸಂಪಾದಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಇದು ಒಬ್ಬ ನಟನ ಪ್ರಬುದ್ಧತೆ, ಬದ್ಧತೆಯನ್ನು ತೋರಿಸುತ್ತದೆ. ಸುದೀಪ, ಕೇಡುಗಾಲದ ಹೊತ್ತಿನಲ್ಲಿ ತಮ್ಮ ವ್ಯಕ್ತಿತ್ವಕ್ಕೆ, ಘನತೆಗೆ ತಾವೇ ಮಸಿ ಬಳಿಯಲು ಹೊರಟಂತಿರುವುದಂತೂ ನಿಜ.
ಹಾಗಂತ ರಾಜ್ಯದಲ್ಲಿ ಸುದೀಪ ಒಬ್ಬರೇ ರಾಜಕೀಯದ ನಂಟು ಹೊಂದಿದ ನಟ ಅಲ್ಲ. ಎಸ್. ನಾರಾಯಣ್, ಸಾಧು ಕೋಕಿಲ, ಮಾಳವಿಕಾ ಅವಿನಾಶ್, ಜಗ್ಗೇಶ್ ಮುಂತಾದವರು ಈಗಾಗಲೇ ರಾಜಕೀಯದಲ್ಲಿದ್ದಾರೆ. ಉಪೇಂದ್ರ, ಪ್ರಕಾಶ್ ರೈ ಪಕ್ಷವನ್ನೇ ಕಟ್ಟಿದ್ದಾರೆ. ಯಶ್, ದರ್ಶನ್ ಕಳೆದ ಬಾರಿ ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರ ಮಾಡಿ ಸುದ್ದಿಯಾದರು. ಅಂಬರೀಶ್ ಕೂಡ ರಾಜಕೀಯದಲ್ಲಿದ್ದರು. ಇವು ಯಾವುವೂ ಅಂತಹ ಪ್ರಭಾವಿ ಬೆಳವಣಿಗೆ ಎನಿಸಲಿಲ್ಲ. ಆದರೆ ಸುದೀಪ ಅವರು ಬೆಳೆದ ಎತ್ತರ, ಅವರ ಘನತೆಗೆ ತಕ್ಕುದಾದ ನಿರ್ಧಾರ ಇದಾಗಿರಲಿಲ್ಲ ಎನ್ನುವುದು ಜನರ ಅಭಿಪ್ರಾಯ.