ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ನಟ ಕಿಚ್ಚ ಸುದೀಪ್ ಅವರು ನಟಿಸಿರುವ ಜಾಹೀರಾತುಗಳ ಪ್ರದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಇಂದು ತಿಳಿಸಿದೆ. ಚುನಾವಣೆಗೆ ಸ್ಪರ್ಧಿಸುವ ಅಥವಾ ಸಾರ್ವಜನಿಕ ಹಣದಿಂದ ದೂರದರ್ಶನದಲ್ಲಿ ಪ್ರಚಾರ ಮಾಡುವ ನಟರನ್ನು ಮಾತ್ರ ವಾಣಿಜ್ಯ ಪ್ರದರ್ಶನದಿಂದ ನಿರ್ಬಂಧಿಸಬಹುದು ಎಂದು ಇಸಿಐ ಸ್ಪಷ್ಟನೆ ನೀಡಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ
ಕಳೆದ ಏಪ್ರಿಲ್ 5ರ (ಬುಧವಾರ)ರಂದು ನಟ ಸುದೀಪ್ ಘೋಷಿಸಿದ್ದರು. ಚುನಾವಣೆಗಳು ಮುಗಿಯುವವರೆಗೆ ಸುದೀಪ್ ಅವರನ್ನು ಒಳಗೊಂಡ ಚಲನಚಿತ್ರಗಳು, ಕಾರ್ಯಕ್ರಮಗಳು ಮತ್ತು ಜಾಹೀರಾತುಗಳ ಪ್ರದರ್ಶನ & ಟಿವಿಗಳಲ್ಲಿ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿತ್ತು. ಬಳಿಕ ECI ಇಂದು ಪ್ರಕಟಣೆ ಹೊರಬಿದ್ದಿದೆ. ಜೆಡಿಎಸ್ ರಾಷ್ಟ್ರೀಯ ವಕ್ತಾರ ತನ್ವೀರ್ ಅಹಮದ್ ಅವರು ನಿರ್ದಿಷ್ಟ ಪಕ್ಷಕ್ಕೆ ಸಂಬಂಧ ಹೊಂದಿರುವ ಯಾವುದೇ ವ್ಯಕ್ತಿಯನ್ನು ದೊಡ್ಡ ಪರದೆಯಲ್ಲಿ ಅಥವಾ ಯಾವುದೇ ದೃಶ್ಯ-ಶ್ರಾವ್ಯ ಮಾಧ್ಯಮದಲ್ಲಿ ತೋರಿಸಬಾರದು ಎಂದು ECIಗೆ ಮನವಿ ಮಾಡಿದ್ದರು.